ಕಂಡೆ ನಾ ತಂಡ ತಂಡದ ಹಿಂಡು

Category: ಶ್ರೀನರಸಿಂಹ

Author: ಕನಕದಾಸ

ಕಂಡೆ ನಾ ತಂಡತಂಡದ ಹಿಂಡು ಹಿಂಡು ದೈವ ಪ್ರಪಂಚ- ರಿಪು
ಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ||ಪ||

ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿ ಹಿಡಿದು ಹಿರಣ್ಯಕನ ತೊಡೆಮೇಲೆ ಕೆಡಹಿದನ ||1||

ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು ನರ
ನರವನು ತೆಗೆದು ನಿರ್ಗಳಿತ ಶೋಣಿತ ಸುರಿಯೆ
ಹರಿಹರಿದು ಕರುಳ ಕೊರಳೊಳಿಟ್ಟವನ ||2||

ಪುರಜನರು ಹಾಯೆನಲು ಸುರರು ಹೂಮಳೆಗರೆಯೆ
ತರತರದ ವಾದ್ಯ ಸಂಭ್ರಮಗಳಿಂದ
ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ
ಕರುಣಾಳು ಕಾಗಿನೆಲೆಯಾದಿಕೇಶವನ ||3||