ಕಡಹಾಯಿಸೊ ಕಮಲಲೋಚನನೆ ಎನ್ನ
Category: ಶ್ರೀಕೃಷ್ಣ
Author: ಕನಕದಾಸ
ಕಡಹಾಯಿಸೊ ಕಮಲಲೋಚನನೆ ಎನ್ನ
ತಡಿಯ ಸೇರಿಸೊ ತರಣಿಶತಕೋಟಿ ತೇಜ ||ಪ||
ಕಾಕು ಇಂದ್ರಿಯಗಳೆಂಬ ಕಟುಕರಿಗೆ ನಾ ಸಿಲುಕಿ
ಮೇಕೆಯಂದದಿ ಬಾಯಿ ಬಿಡುತಿಪ್ಪೆನು
ಸಾಕಾರ ರೂಪ ಸರ್ವೋತ್ತಮನೆ ನೀ ಕರು-
ಣಾಕರನೆಂಬ ಪೆಂಪುಂಟಾದಡೀಗೆನ್ನ ||1||
ಹಲವು ಜನ್ಮದ ಪಾಪವೆನಿಪ ಸೊಕ್ಕಾನೆ ಸೊಂ
ಡಿಲು ಸುತ್ತಿ ಬಂದು ಸೀವರಿಸುತಿದೆಕೊ
ಮಲೆವ ದುಷ್ಕೃತವೆಂಬ ಗಜಕೆ ಕೇಸರಿ ಎಂಬ
ಛಲ ಬಿರುದು ತಾಳ್ದ ದೇವರ ದೇವ ನೀನೆನ್ನ ||2||
ಹಾದಿಗಾಣದೆ ತೊಲಗಿ ಪೋಪೆನೆಂದರೆ ಭಾವ
ಬೂದಿಯೊಳಗಾಡಿ ಮುಳುಗಾಡುತಿಹೆನೊ
ಭೂಧರನ ತಾಳ್ದ ಕೂರ್ಮಾವತಾರನೆ ಬಾಡ
ದಾದಿಕೇಶವರಾಯ ಬೆನ್ನಲೆತ್ತಿಕೊಂಡು ||3||