ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ
Category: ಶ್ರೀಕೃಷ್ಣ
Author: ಕನಕದಾಸ
ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ ಇಲ್ಲವೆಂದು- ಮಿಕ್ಕ
ಬಣಗು ದೈವದ ಗೊಡವೆ ಬೇಡ ನರಕ ತಪ್ಪದು ||ಪ||
ಎಕ್ಕನಾತಿಯರು ಕಾಟಿ ಜಕ್ಕಿ ಜಲಕನ್ಯೆಯರು
ಸೊಕ್ಕಿನಿಂದ ಸೊಂಟ ಮುರುಕ ಬೈರೇದೇವರು
ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದ
ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು ||1||
ಸುತ್ತಣವರ ಮಾತ ಕೇಳಿ ಗುತ್ತಿಯ ಎಲ್ಲಮ್ಮಗೊಲಿದು
ಬತ್ತಲೆಯೆ ದೇವರೆದುರು ಬರುವುದು ನೋಡಿರೊ
ಮತ್ತೆ ಬೇವಿನುಡಿಗೆಯ ಅರ್ತಿಯಿಂದುಟುಗೊಂಡು
ಮುಕ್ತಿ ಕಾಂಬೆವೆಂಬ ಮೌಢ್ಯ ಬೇಡಿರೊ ||2||
ತೂಳದವರ ಮಾತ ಕೇಳಿ ಖೂಳರೆಲ್ಲ ಕೂಡಿಕೊಂಡು
ಹಾಳು ಮಾಡಿ ಕೈಯಲ್ಲಿದ್ದ ಹೊನ್ನು ಹಣಗಳ
ಬಾಳುತಿಪ್ಪ ಕೋಣ ಕುರಿಯ ಏಳ ಬೀಳ ಕೊರಳ ಕೊಯ್ದು
ಬೀಳ ಬೇಡಿ ನರಕಕೆಂದು ಹೇಳ ಬಂದೆನೊ ||3||
ಹೊಳ್ಳದ ಬಿಚ್ಚೇರು ಸಹಿತ ಸುಳ್ಳರೆಲ್ಲ ಕೂಡಿಕೊಂಡು
ಬೆಳ್ಳನ ಬೆಳತನಕ ನೀರ ತಡಿಯಲಿ ಕುಳಿತು
ಗುಳ್ಳೆ ಗೊರಜೆ ಕೂಡಿ ತಿಂದು ಕಳ್ಳುಕೊಡನ ಬರಿದು ಮಾಡುವಂಥ
ಪೊಳ್ಳುದೈವದ ಗೊಡವೆ ಬೇಡ ನರಕ ತಪ್ಪದು ||4||
ಪೊಡವಿಗಧಿಕ ವಿಜಯನಗರದೊಡೆಯ ಕಟ್ಟೆ ವೆಂಕಟೇಶ
ಕಡು ಚೆಲ್ವ ಕಟ್ಟಾಣಿ ಕನಕನೊಡೆಯ
ಬಡದಾದಿ ಕೇಶವನ ಪಾದ ಬಿಡದೆ ಭಜಿಸಿರೊ
ಜಡದೈವಗಳ ಇಂಥ ಪೂಜೆ ಬೇಡ ಕಾಣಿರೋ ||5||