ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ
Category: ಇತರೆ
Author: ಕನಕದಾಸ
ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ, ಕಾಯೆನ್ನ ಸಿರಿಯ ನಲ್ಲ||ಪ||
ಬಲು ಘೋರ ಪಾತಕದಿ ಇಳೆಯು ತಲ್ಲಣಗೊಂಡು
ಕಳವಳಿಸುತಿದೆ ಕಾಲ ವಿಪರೀತದಿ ||ಅ||
ಅತ್ತೆಯ ಸೊಸೆ ಬೈವಳು- ಪುತ್ರರು ತಮ್ಮ
ಹೆತ್ತ ತಾಯಿಯ ಬಿಡುವರು
ಉತ್ತಮ ಗರತಿಗೆ ಅಪವಾದ- ಅವಿವೇಕಿಗಳು
ಎತ್ತ ನೋಡಲು ಹೆಚ್ಚಿ ಹೆದರಿಸಿತು
ನ್ಮತ್ತತನದಲಿ ಮನೆಯ ರಚಿಸುವರು
ಭಕ್ತಿಯೆಂಬುದ ಬಯಸದಿರುವರು
ಕತ್ತಲಾಯಿತು ಕಲಿಯ ಮಹಿಮೆ ||1||
ನಿತ್ಯನೇಮವು ನಿಂತಿತು- ಹೋಯಿತಲ್ಲ
ಜಾತಿಗೈಶ್ವರ್ಯ ಭೋಗಭಾಗ್ಯ
ದಾತರಾದವರಿಗೆ ಧಾರಣೆ ಪಾರಣೆ
ಜಾತಿನೀತಿಗಳೆಲ್ಲ ಒಂದಾಗಿ
ಪಾತಕದಿ ಮನವೆರಗಿ ಮೋಹಿಸುತ
ಮಾತಾಪಿತೃ ಗುರುದೈವ ದ್ರೋಹದಿ
ಭೂತಳವು ನಡುನಡುಗುತಿಹುದು ||2||
ಬಿನ್ನಣ ಮಾತುಗಳು ಮತ್ತೆ ಮತ್ತೆ
ಘನ್ನ ಮತ್ಸರ ಕ್ರೋಧಗಳು
ಅನ್ಯಾಯದಿಂದ ಅರ್ಥವ ಗಳಿಸುವರು
ತನ್ನ ಕಾಂತನ ಬಿಟ್ಟು ಸ್ತ್ರೀಯರು
ಅನ್ಯರಿಗೆ ಮನವೆರಗಿ ಮೋಹಿಪರು
ಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ
ಸನ್ನ ಶ್ರೀ ನೆಲೆಯಾದಿ ಕೆಶವನೆ ||3||