ಕಾಡುವ ದುರಿತಗಳನು ಬಿಡಿಸೆಂದು

Category: ವೈರಾಗ್ಯ

Author: ಕನಕದಾಸ

ಕಾಡುವ ದುರಿತಗಳನು ಬಿಡಿಸೆಂದು
ಬೇಡಿಕೊಂಬೆನೊ ದೇವ ನಾ ನಿನ್ನ ||ಪ||

ಅಡಿದಾಸನೆಂಬೋ ಎನಗೊಂದು
ದೃಢ ಬುದ್ಧಿಯು ಇಲ್ಲದೆ
ಮಡದಿ ಮಕ್ಕಳೆಂಬೊ ಕಡಲೊಳು ಮುಳುಗಿದೆ
ಕಡೆ ಹಾಯಿಸೊ ಎನ್ನೊಡೆಯ ನೀನಾದಡೆ ||1||

ಆಸೆಗಳ ಆಧಿಕ್ಯದಿಂದೀ ಪರಿಯ ಯಮ
ಪಾಶಕ್ಕೆ ಒಳಗಾದೆನೋ
ಮೀಸಲೂಳಿಗವ ಮಾಡದೆಯೆ ಪರಿಪರಿಯ
ಕ್ಲೇಶದಿಂದಲಿ ಗಾಸಿಗೊಂಡೆನಯ್ಯ ||2||

ಪಾಡುವೆನು ನಿನ್ನ ನಾಮ ಸೀತಾರಾಮ
ಆಡುವೆನು ಮನದಣಿವ ತನಕ
ಬೇಡಿಕೊಂಬೆನೊ ನಿನ್ನ ಭಕ್ತರ ಸೇವೆಯನು
ಬಾಡದಾದಿ ಕೇಶವ ಭಕ್ತವತ್ಸಲನೆ ||3||