ಕಾಯೊ ಕರುಣಾಕರನೆ

Category: ಶ್ರೀಕೃಷ್ಣ

Author: ಕನಕದಾಸ

ಕಾಯೊ ಕರುಣಾಕರನೆ ಕಡುಪಾಪಿ ನಾನು
ನ್ಯಾಯವೆಂಬುದು ಎನ್ನೊಳೆಳ್ಳನಿತಿಲ್ಲ ||ಪ||

ಎಣ್ಣೆಕೊಪ್ಪರಿಗೆಯೊಳ್ಬಿದ್ದು ಸ್ತುತಿಸಿದವನಲ್ಲ
ಚಿನ್ನಕಶಿಪು ಬಾಧೆಗೊಳಗಾದವನಲ್ಲ
ಬಣ್ಣಗೆಟ್ಟಡವಿಯಲಿ ತಪಸು ಮಾಡಿದವನಲ್ಲ
ಹೆಣ್ಣನೊಲ್ಲದೆ ನಿನ್ನ ಬಂಟನಾದವನಲ್ಲ ||1||

ಒಲಿದು ದಾನವನಿತ್ತ ವೈರಿಕುಲದವನಲ್ಲ
ಬಲು ಭಕುತಿಯ ದಾಸಿ ಪುತ್ರ ನಾನಲ್ಲ
ಕಲಹದಲಿ ಪಣೆಗೆ ಬಾಣವ ನೆಡಿಸಿದವನಲ್ಲ
ಕಳವಳದಿ ಕರೆದ ಪಾಂಚಾಲಿ ನಾನಲ್ಲ ||2||

ಉರಗರಾಜನ ತೆರದಿ ಹಾಸಿಗಾದವನಲ್ಲ
ಗರುಡನಂದದಿ ಪೊತ್ತು ತಿರುಗಿದವನಲ್ಲ
ಸಿರಿಧವನೆ ಕಾಗಿನೆಲೆಯಾದಿಕೇಶವ ನಿನ್ನ
ಚರಣ ಡಿಂಗರಿಗ ಮಾತ್ರ ನಾನಾಗಿಹೆನೆಂದು ||3||