ಕುಲಕುಲವೆಂದು ಹೊಡೆದಾಡದಿರಿ
Category: ಶ್ರೀಕೃಷ್ಣ
Author: ಕನಕದಾಸ
ಕುಲಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರು ಬಲ್ಲಿರ ||ಪ||
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ ||1||
ಜಲವೆ ಸಕಲ ಕುಲಕ್ಕೆ ತಾಯಲ್ಲದೆ
ಜಲದ ಕುಲವನೇನಾದರು ಬಲ್ಲಿರ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯನರಿತು ನೀ ನೆನೆ ಕಂಡ್ಯ ಮನುಜ ||2||
ಹರಿಯೆ ಸರ್ವೋತ್ತಮ ಹರಿಯೆ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿ ಕಾಗಿನೆಲೆಯಾದಿಕೇಶವರಾಯನ
ಚರಣ ಕಮಲವ ಕೀರ್ತಿಸುವನೆ ಕುಲಜ ||3||