ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು

Category: ಇತರೆ

Author: ಕನಕದಾಸ

ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು ||ಪ||

ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈ ||ಅ||

ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗ
ಬೇರೊಂದು ಲಿಂಗ ಬೆಲೆ ಮಾಡಿ ತಂದು
ತೋರುವಂಗೈಲಿಟ್ಟು ತೋಯ ಪುಷ್ಪವ ನೀಡಿ
ಯಾರ ಮನಕೊಪ್ಪಿಸುವರೀ ಶೀಲವಂತರು ||1||

ಲಿಂಗವೊಂದು ತನ್ನೊಳು ಲೀನವಾಗಿರುವಾಗ
ಅಂಗಭವಿಗಳು ಕೂಡಿ ಆಡಿಕೊಂಬರು
ಅಂಗದನುಭವದರ್ಥವನರಿಯದ ಇಂತಹ
ಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ ||2||

ನಾಗಲಿಂಗ ತನ್ನೊಳು ನಾಟ್ಯವಾಡುತಲಿರಲು
ಆಗಮಿಸಿದ ಲಿಂಗವ ಬೆದಕಲೇತಕ್ಕೆ
ಕಾಗಿನೆಲೆಯಾದಿಕೇಶವನೆ ನಾಗಶಯನ
ನಾಗಿರಲು ಬೇರೊಂದನರಸಲೇತಕ್ಕೆ ||3||