ಗೋವಿಂದ ಸಲಹೆನ್ನನು - ಸದಾನಂದ
Category: ಶ್ರೀಕೃಷ್ಣ
Author: ಕನಕದಾಸ
ಗೋವಿಂದ ಸಲಹೆನ್ನನು- ಸದಾನಂದ
ಗೋವಿಂದ ಸಲಹೆನ್ನನು ||ಪ||
ಗೋವಿಂದ ಸಲಹೆನ್ನ ಕುಮುದಲೋಚನ ನಿನ್ನ
ಸೇವಕರಡಿಯ ಸೇವಕನಯ್ಯ ಗೋವಿಂದ ||ಅ||
ತಮನ ಸಂಹರಿಸಿ ವೇದವ ತಂದೆ ಗೋವಿಂದ
ಅಮರರಿಗಮೃತ ಪಾನವನಿತ್ತೆ ಗೋವಿಂದ
ರಮಣಿಯ ತಂದ ವರಹರೂಪಿ ಗೋವಿಂದ
ಭ್ರಮಿಸಿ ಕಂಬದೊಳುದ್ಭವಿಸಿದೆ ಗೋವಿಂದ
ಕ್ಷಮೆಯನಳೆದ ಬ್ರಹ್ಮಚಾರಿಯೆ ಗೋವಿಂದ
ಸಮರದೊಳಖಿಲ ರಾಯರ ಕೊಂದೆ ಗೋವಿಂದ
ಕಮಲಾಕ್ಷ ಕಡಲ ಕಟ್ಟಿದ ದಿಟ್ಟ ಗೋವಿಂದ
ಮಮತೆಯೊಳಿಳೆಯ ಗೋವ್ಗಳಕಾಯ್ದೆ ಗೋವಿಂದ
ರಮಣಿಯರ್ಗೊಲಿದು ಬತ್ತಲೆ ನಿಂತೆ ಗೋವಿಂದ
ವಿಮಲ ತುರಗವೇರಿ ನಡೆಸಿದೆ ಗೋವಿಂದ
ನಮಿಪರಿಗೊಲಿದೆ ಗೋವಿಂದ- ನಿಂದಿಪರಿಗೆ
ಶಮನನಂತಿಪ್ಪೆ ಗೋವಿಂದ- ಎಲ್ಲರೊಳಿಪ್ಪ
ಅಮಿತ ಮಹಿಮ ಗೋವಿಂದ- ಇಂಗಡಲೊಳು
ಗಮನ ನಿರ್ಜಿತ ಗೋವಿಂದ- ಅಚ್ಯುತ ಸರ್ವೋ
ತ್ತಮನೆ ಚಿನ್ಮಯ ಗೋವಿಂದ- ನಿಶ್ಚಲಭಕ್ತಿ
ಕ್ರಮವ ಬೋಧಿಸೊ ಗೋವಿಂದ- ಪಾಪವನೆಲ್ಲ
ಶಮನಗೊಳಿಪ ಗೋವಿಂದ- ಲಕ್ಷ್ಮೀರಮಣ
ನಮೋ ದಶಾವತಾರಿ ಗೋವಿಂದ ||1||
ಮನವೆನ್ನ ಮಾತು ಕೇಳದು ಕಾಣೊ ಗೋವಿಂದ
ಮನವ ಗೆಲ್ಲುವ ಬಲ ಎನಗಿಲ್ಲ ಗೋವಿಂದ
ಕನಸಿನಂತಿಹ ದೇಹ ಸ್ತಿರವಲ್ಲ ಗೋವಿಂದ
ಬಿನುಗು ಬುದ್ಧಿಗಳ ಬಿಡಿಸಯ್ಯ ಗೋವಿಂದ
ನೆನಹು ನಿನ್ನೊಳಗಿಟ್ಟು ನಡೆಸಯ್ಯ ಗೋವಿಂದ
ನೆನೆವ ದಾಸರ ಮನದೊಳಗಿರ್ಪ ಗೋವಿಂದ
ವನಜಲೋಚನ ನಾ ನಿನ್ನವನಯ್ಯ ಗೋವಿಂದ
ಘನ ಮಹಿಮನೆ ನಿನ್ನ ಮೊರೆಹೊಕ್ಕೆ ಗೋವಿಂದ
ಮುನಿಗಳ ಮನದೊಳು ಮಿನುಗುವ ಗೋವಿಂದ
ನಿನಗಲ್ಲದಪಕೀರ್ತಿ ಎನಗೇನೊ ಗೋವಿಂದ
ಜನನ ರಹಿತ ಗೋವಿಂದ- ನಿನ್ನಡಿಗಳ
ನೆನವು ಕೊಡೊ ಗೋವಿಂದ- ದುರ್ವಿಷಯ ವಾ
ಸನೆಯ ಬಿಡಿಸೊ ಗೋವಿಂದ- ಕುತ್ಸಿತ ಕೆಟ್ಟ
ತನವ ಬಿಡಿಸೊ ಗೋವಿಂದ- ಸದ್ಗುಣವೆಂಬ
ಧನವ ತುಂಬಿಸೊ ಗೋವಿಂದ- ಇದಕ್ಕೆ ಬಡ
ತನವೆ ನಿನಗೆ ಗೋವಿಂದ- ಸದಾ ನಿನ್ನ
ಘನ ಸ್ಮರಣೆ ಕೊಡು ಗೋವಿಂದ- ಸನಕ
ಸನಂದನಾರ್ಚಿತ ಗೋವಿಂದ ||2||
ನರ ಬೊಂಬೆಗಳ ಮಾಡಿ ಕುಣಿಸುವೆ ಗೋವಿಂದ
ನರರ ನೋಡಿ ನೋಡಿ ನಗುತಿರ್ಪೆ ಗೋವಿಂದ
ಅರಿದೆನೆಂಬರಿಗಂತ್ಯ ತೋರದೊ ಗೋವಿಂದ
ಪರಮ ಪಾವನನೆಂಬ ಬಿರುದುಳ್ಳ ಗೋವಿಂದ
ಪರಮ ಪುರುಷ ಪುರುಷೋತ್ತಮ ಗೋವಿಂದ
ಪರಬ್ರಹ್ಮ ಪರಮ ಪರಾತ್ಪರ ಗೋವಿಂದ
ಮೊರೆ ಹೊಕ್ಕ ಭಕ್ತರ ಸಲಹುವ ಗೋವಿಂದ
ಕರಿರಾಜ ಕರೆಯಲೊದಗಿ ಬಂದೆ ಗೋವಿಂದ
ಗರುಡಗಮನ ಗೋವಿಂದ- ಕಿನ್ನರ ಸಿದ್ಧ
ಗರುಡ ಸನ್ನುತ ಗೋವಿಂದ- ಅಪರಿಮಿತ
ಕರುಣಾಸಾಗರ ಗೋವಿಂದ- ಅರಿಯದಂಥ
ಪರಮ ಜ್ಯೋತಿಯೆ ಗೋವಿಂದ- ಗಂಗೆಯ ಪೆತ್ತ
ಚರಣ ನಿರ್ಮಲ ಗೋವಿಂದ- ತೆತ್ತೀಸ ಕೋಟಿ
ಸುರರ ಪೊರೆವ ಗೋವಿಂದ- ಶ್ರೀವೈಕುಂಠ
ಪುರದೊಳಗಿಹ ಗೋವಿಂದ- ಅಚ್ಯುತಾನಂತ
ತಿರುಪತಿ ನೆಲೆಯಾದಿ ಕೇಶವ ಗೋವಿಂದ ||3||