ಗೋವಿಂದ ಹರಿ ಗೋವಿಂದ
Category: ಶ್ರೀಕೃಷ್ಣ
Author: ಕನಕದಾಸ
ಗೋವಿಂದ ಹರಿ ಗೋವಿಂದ ||ಪ||
ಗೋವಿಂದ ಪರಮಾನಂದ ಮುಕುಂದ ||ಅ||
ಮಚ್ಛ್ಯಾವತಾರದೊಳಾಳಿದನೆ- ಮಂದ
ರಾಚಲ ಬೆನ್ನೊಳು ತಾಳಿದನೆ
ಅಚ್ಛ ಸೂಕರನಾಗಿ ಬಾಳಿದನೆ- ಮದ
ಹೆಚ್ಚೆ ಹಿರಣ್ಯಕನ ಸೀಳಿದನೆ ||1||
ಕುಂಭಿನಿ ದಾನವ ಬೇಡಿದನೆ- ಕ್ಷಾತ್ರ
ರೆಂಬುವರನು ಹತ ಮಾಡಿದನೆ
ಅಂಬುಧಿಗೆ ಶರ ಹೂಡಿದನೆ- ಕಮ
ಲಾಂಬಕ ಗೊಲ್ಲರೊಳಾಡಿದನೆ ||2||
ವಸುದೇವನುದರದಿ ಪುಟ್ಟಿದನೆ- ಪಲ್
ಮಸೆವ ದನುಜರೊಡೆಗುಟ್ಟಿದನೆ
ಎಸೆವ ಕಾಳಿಂಗನ ಮೆಟ್ಟಿದನೆ- ಬಾ
ಧಿಸುವರ ಯಮಪುರಕಟ್ಟಿದನೆ ||3||
ಪೂತನಿಯ ಮೈ ಸೋಕಿದನೆ- ಬಲು
ಘಾತದ ಮೊಲೆಯುಂಡು ತೇಕಿದನೆ
ಘಾತಕಿಯನತ್ತ ನೂಕಿದನೆ- ಗೋಪ
ವ್ರಾತ ಗೋಗಳನೆಲ್ಲ ಸಾಕಿದನೆ ||4||
ಸಾಧಿಸಿ ತ್ರಿಪುರರ ಗೆಲಿದವನೆ- ಮ್ಲೇಚ್ಛರ
ಛೇದಿಸೆ ಹಯವೇರಿ ಕೆಲೆದವನೆ
ಸಾಧುಸಂತರೊಡನೆ ನಲಿದವನೆ- ಬಾಡ
ದಾದಿಕೇಶವ ಕನಕಗೊಲಿದವನೆ ||5||