ಜಗದಂತರ್ಯಾಮಿಯೆಂದೆನುತ ನಿನ್ನ
Category: ಶ್ರೀಕೃಷ್ಣ
Author: ಕನಕದಾಸ
ಜಗದಂತರ್ಯಾಮಿಯೆಂದೆನುತ ನಿನ್ನ
ನಿಗಮ ಸಾರುವ ಮಾತು ಪುಸಿಯೆ ರಂಗ ||ಪ||
ಭೇದವಿಲ್ಲದೆ ಸಕಲ ಜೀವರನು ಪೊತ್ತಿಹಳು
ಭೂದೇವಿಯೆಂಬಾಕೆ ನಿನ್ನ ಅರ್ಧಾಂಗಿಯು
ಸಾಧನವು ಸಕಲ ಸಿರಿ ಸಂಪತ್ತುಗಳನೀವ
ಶ್ರೀದೇವಿ ನಿನ್ನ ಹಿರಿಯರಸಿಯೋ ದೇವ ||1||
ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳನ್ನು
ಬೊಂಬೆಗಳ ಮಾಡಿ ಭವರಂಗದಲಿ
ತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವ
ಅಂಬುಜೋದ್ಭವ ನಿನ್ನ ಹೆಮ್ಮಗನು ದೇವ ||2||
ಸಕಲ ಜೀವರಾಶಿಗಳನು ಕಲ್ಪಿಸುವ ಬೀಜ
ಸುಖದಿಂದ ಮಾಯಾಂಗನೆಯರೊಡಲೊಳು
ಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವ
ಮಕರಾಂಕ ನಿನ್ನ ಕಿರಿಮಗ ದೇವ ||3||
ರಾಮನಾಮವ ಜಪಿಸಿ ಪರಮ ವೈಷ್ಣವನಾಗಿ
ಹೇಮಗಿರಿ ಸನಿಹ ಸಾಹಸ್ರನಾಮ
ಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದ
ಸೋಮಶೇಖರನು ನಿನ್ನ ಮೊಮ್ಮಗನು ||4||
ಜಂಗಮ ಸ್ಥಾವರಕಾಧಾರವಾಗಿಹಳು
ಭಂಗಪಡುವ ಜನರ ಕರ್ಮವ ಕಳೆವಳು
ಹಿಂಗದೆ ಜಗವ ಪಾವನವ ಮಾಡುವ ಪುಣ್ಯ
ಗಂಗೆಯೆಂಬಾಕೆ ನಿಮ್ಮಯ ಮಗಳು ದೇವ ||5||
ಶುದ್ಧ ಬುದ್ಧಿಯನುಳ್ಳ ಪ್ರದ್ಯುಮ್ನನಾ ಮಗಳು
ಶ್ರದ್ಧೆಯೆನಿಸಿಕೊಂಡು ಸೂತ್ರಗೆ ಸತಿಯಾಗಿ
ಸದ್ಯೋಜಾತನ ಪಡೆದು ಪ್ರಸಿದ್ಧವಹ ದೇವಿ
ಈ ಧರೆಯೊಳು ಪುಟ್ಟಿ ನಿನ್ನ ದಾಸಿಯಾದಳು ||6||
ಇಂತು ಅಣುರೇಣು ತೃಣಕಾಷ್ಟದೊಳಗೆಲ್ಲ
ಸಂತೋಷವಾಗಿಹುದು ನಿನ್ನ ಸ್ಮರಣೆ
ಯಂತ್ರವಾಹಕನೆಂಬ ಬಿರುದು ಸಲುವುದು ನಿನಗೆ
ಕಂತುಪಿತ ಕಾಗಿನೆಲೆಯಾದಿಕೇಶವನೆ ||7||