ತನು ನಿನ್ನದು ಜೀವನ ನಿನ್ನದು ರಂಗ

Category: ಶ್ರೀಕೃಷ್ಣ

Author: ಕನಕದಾಸ

ತನು ನಿನ್ನದು ಜೀವನ ನಿನ್ನದು ರಂಗ ||ಪ||
ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ||ಅ||

ಸವಿನುಡಿ ವೇದ ಪುರಾಣ ಶಾಸ್ತ್ರಂಗಳ
ಕಿವಿಗೊಟ್ಟು ಕೇಳುವ ಕಥೆ ನಿನ್ನದು
ನವವಮೋಹನಾಂಗಿಯರ ರೂಪವನು ಕಣ್ಣಿಂದ
ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ||1||

ಒಡಗೂಡಿ ಗಂಧ ಕಸ್ತೂರಿ ಪರಿಮಳಂಗಳ
ಬಿಡದೆ ಲೇಪಿಸಿಕೊಂಬುವುದು ನಿನ್ನದು
ಷಡುರಸದನ್ನಕ್ಕೆ ನಲಿದಾಡುವ ಚಿಹ್ವೆ
ಕಡು ರುಚಿಗೊಂಡರಾ ರುಚಿ ನಿನ್ನದಯ್ಯ||2||

ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವ
ಕಾಯ ಪಂಚೇಂದ್ರಿಯಂಗಳು ನಿನ್ನವು
ಕಾಯಜಪಿತ ಕಾಗಿನೆಲೆಯಾದಿಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೆ ||3||