ತನ್ನ ಪ್ರಾಪ್ತಿಯ ಫಲವ ತಾನರಿಯದೆ

Category: ಶ್ರೀಕೃಷ್ಣ

Author: ಕನಕದಾಸ

ತನ್ನ ಪ್ರಾಪ್ತಿಯ ಫಲವ ತಾನರಿಯದೆ ||ಪ||
ಇನ್ನು ನುಡಿವುದು ಮೂರ್ಖತನವಲ್ಲವೆ ||ಅ||

ಸರಸಿಜೋದ್ಭವನು ಫಣೆಯೊಳು ಬರೆದು ನಿರ್ಮಿಸಿದ
ತೆರನೊಂದು ಬೇರುಂಟೆ ತಾನರಿಯದೆ
ಕೆರಕೊಂಡು ಕಂಡವರ ಕೂಡೆ ತಾನಾಡಿದರೆ
ನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ||1||

ಬಡತನವು ಬಂದಲ್ಲಿ ಬಾಯಿ ಬಿಟ್ಟರೆ ಮುನ್ನ
ಪಡೆದಂಥ ವಿಧಿ ಬೆನ್ನ ಬಿಡಲರಿವುದೆ
ಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆ
ಬಡತನವು ತಾ ಬಿಟ್ಟು ಕಡೆಗೆ ಕದಲುವುದೆ ||2||

ದೆಸೆಗೆಟ್ಟು ನಾಡದೈವಂಗಳಿಗೆ ಎರಗಿದರೆ
ನೊಸಲ ಬರೆಹವ ತೊಡೆದು ತಿದ್ದಲಳವೆ
ವಸುಧೀಶ ಕಾಗಿನೆಲೆಯಾದಿಕೇಶವನಂಘ್ರಿ
ಬಿಸಜವನು ಕಂಡು ನೀ ಸುಖಿಯಾಗು ಮನುಜ ||3||