ತಾನ್ಯಾರು ತನ್ನ ದೇಹವ್ಯಾರು

Category: ಶ್ರೀಕೃಷ್ಣ

Author: ಕನಕದಾಸ

ತಾನ್ಯಾರು ದೇಹವ್ಯಾರು - ದಿವ್ಯ
ಜ್ಞಾನದಲಿ ತಿಳಿದಾತ ಪರಮಯೋಗಿ ||ಪ||

ಸೂತಿಕಾವಸ್ಥೆಯಲಿ ನವಮಾಸ ನೆರೆದಾಗ
ಮಾತೆಯುದರದಿ ಬಂದು ಬೆಳೆದು ನಿಂದು
ಪಾತಕವದೊಂದು ಮೂರುತಿಯಾದ ತನುವೆಂದು
ನೀತಿಯಲಿ ತಿಳಿದಾತ ಪರಮಯೊಗಿ ||1||

ಅಸ್ಥಿಪಂಜರದ ನರಗಳ ತೊಗಲಿನ ಹೊದಿಕೆಯ
ವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯು
ರಕ್ತ ಮಲ ಮೂತ್ರ ಕೀವಿನ ಪ್ರಳಯದೊಡಲೆಂದು
ಸ್ವಸ್ಥದಿಂ ತಿಳಿದಾತ ಪರಮಯೋಗಿ ||2||

ಘೋರ ನರಕದ ತನುವು ಎಂದು ಮನದಲಿ ತಿಳಿದು
ಗೇರು ಹಣ್ಣಿನ ಬೀಜದಂತೆ ಹೊರಗಿದ್ದು
ಮಾರಪಿತ ಕಾಗಿನೆಲೆಯಾದಿಕೇಶವನ ಪಾದ
ವಾರಿಜವ ನೆನೆದವನೆ ಪರಮಯೋಗಿ ||3||