ಜಯ ಜಾನಕೀಕಾಂತ

Category: ಶ್ರೀರಾಮ

Author: ಪುರಂದರದಾಸ

ಜಯ ಜಾನಕೀಕಾಂತ ಜಯ ಸಾಧುಜನವಿನುತ |
ಜಯತು ಮಹಿಮಾವಂತ ಜಯ ಭಾಗ್ಯವಂತ ||

ದಶರಥಾತ್ಮಜ ವೀರ ದಶಕಂಠಸಂಹಾರ
ಪಶುಪತೀಶ್ವರಮಿತ್ರ ಪಾವನಚರಿತ್ರ |
ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ
ಆಸಮಸಾಹಸಶಿಕ್ಷ ಅಂಬುಜದಳಾಕ್ಷ ||

ಸಾಮಗಾನಲೋಲ ಸಾಧುಜನಪರಿಪಾಲ
ಕಾಮಿತಾರ್ಥವಿದಾತ ಕೀರ್ತಿಸಂಜಾತ |
ಸೋಮಸೂರ್ಯಪ್ರಕಾಶ ಸಕಲ ಲೋಕಾಧೀಶ
ಶ್ರೀಮಹಾರಘುವೀರ ಸಿಂಧುಗಂಭೀರ ||

ಸಕಲಶಾಸ್ತ್ರವಿಚಾರ ಶರಣಜನಮಂದಾರ
ವಿಕಸಿತಾಂಬುಜವದನ ವಿಶ್ವಮಯಸದನ |
ಸುಕೃತಮೋಕ್ಷಾಧೀಶ ಸಾಕೇತಪುರವಾಸ
ಭಕ್ತವತ್ಸಲರಾಮ ಪುರಂದರವಿಟ್ಠಲ ||