ತಿಳಿಯ ಬರದೆಲೆ ಮನವೆ

Category: ಶ್ರೀಕೃಷ್ಣ

Author: ಕನಕದಾಸ

ತಿಳಿಯ ಬರದೆಲೆ ಮನವೆ, ತೀರ್ಥ ಯಾತ್ರೆಯ ಫಲವು ||ಪ||
ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ ||ಅ||

ನೂರೆಂಟು ತಿರುಪತಿಯ ಯಾತ್ರೆಯನು ನಾನೊಲ್ಲೆ
ವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆ
ಸಾರ ರೇಣುವೆಯುಂಡು ಕಡೆಯ ಬಾಗಿಲ ಕಾಯ್ವ
ನೀರ ಗೌಡಿಯ ಮಗನ ಮಗನ ಮಗನೆನಿಸೆನ್ನ ||1||

ಪಂಚಾನ್ನ ಪರಮಾನ್ನವಾವುದನು ನಾನೊಲ್ಲೆ
ಚಂಚಲಗೊಳಿಸುವ ಭೋಗ ಭಾಗ್ಯವ ನಾನೊಲ್ಲೆ
ಹಿಂಚದೆ ದಾಸೋಹ ಮಾಳ್ಪವರ ಮನೆಯ ಕಾಯ್ವ
ಉಂಚ ಗೌಡಿಯ ಮಗನ ಮಗನ ಮಗನೆನಿಸೆನ್ನ ||2||

ಪಟ್ಟೆ ಪಟ್ಟಾವಳಿ ದುಕೂಲವನು ನಾನೊಲ್ಲೆ
ಪಟ್ಟೆ ನಾಮದ ಬರಿಯ ಪ್ರದರ್ಶನ ನಾನೊಲ್ಲೆ
ಸೃಷ್ಟಿಯೊಳು ನಿನ್ನ ಭಜಿಪ ಭಕ್ತರ ಮನೆ ಕಾಯ್ವ
ಮುಟ್ಟುಗೌಡಿಯ ಮಗನ ಮಗನ ಮಗನೆನಿಸೆನ್ನ ||3||

ಮುತ್ತಿನಾಭರಣ ತಾಳಿ ಪದಕವ ನಾನೊಲ್ಲೆ
ಸತ್ತಿಗೆಯ ನೆರಳಿನಲಿ ಸಾಗುವುದ ನಾನೊಲ್ಲೆ
ನಿತ್ಯ ನಿನ್ನ ನೆನೆವರ ಮನೆಯ ಬಾಗಿಲ ಕಾಯ್ವ
ತೊತ್ತುಗೌಡಿಯ ಮಗನ ಮಗನ ಮಗನೆನಿಸೆನ್ನ ||4||

ಆಶೆ ಪಾಶಗಳೆಂಬ ಜಂಜಾಟ ನಾನೊಲ್ಲೆ
ದೇಶಾನುದೇಶಗಳ ತಿರುಗಾಟ ನಾನೊಲ್ಲೆ
ಶ್ರೀಶಾದಿಕೇಶವನ ಭಜಿಪರ ಮನೆಯ ಕಾಯ್ವ
ಕಸಗೌಡಿಯ ಮಗನ ಮಗನ ಮಗನೆನಿಸೆನ್ನ ||5||