ದಾನಧರ್ಮವ ಮಾಡಿ ಸುಖಯಾಗು ಮನವೆ

Category: ಇತರೆ

Author: ಕನಕದಾಸ

ದಾನಧರ್ಮವ ಮಾಡಿ ಸುಖಿಯಾಗು ಮನವೆ ||ಪ||
ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ||ಅ||

ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯ
ಅಕ್ಕರಿಂದಲಿ ಪೂಜೆ ಮಾಡಲೇಕೆ
ಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗ
ಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ ||1||

ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದು
ತಂಬಿಟ್ಟಿನಾ ದೀಪ ಹೊರಲೇತಕೆ
ಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬ
ದೊಂಬಿ ದೈವಗಳ ಭಜಿಸದಿರು ಮನವೆ ||2||

ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆ
ಬಗೆಬಗೆಯಿಂದ ಶೃಂಗಾರ ಮಾಡಿ
ನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನು
ಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ ||3||

ದಾನಧರ್ಮ ಪರೋಪಕಾರವ ಮಾಡು
ದೀನನಾಗಿ ನೀ ಕೆಡಬೇಡವೊ
ಜ್ಞಾನವಿಲ್ಲದೆ ಹೀನ ದೈವವ ಭಜಿಸಿದರೆ
ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ ||4||

ನರಲೋಕದಲಿ ಯಮನ ಬಾಧೆಯನು ಕಳೆಯಲು
ವರ ಪುಣ್ಯ ಕಥೆಗಳನು ಕೇಳುತಲಿ
ಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿ
ಸ್ಥಿರ ಪದವಿಯನು ಪಡೆ ಹುಚ್ಚು ಮನವೆ ||5||