ದಾಸ ಪಟ್ಟವೋ ಸನ್ಯಾಸ ಪಟ್ಟವೋ

Category: ಇತರೆ

Author: ಕನಕದಾಸ

ದಾಸ ಪಟ್ಟವೋ ಸನ್ಯಾಸ ಪಟ್ಟವೋ ||ಪ||
ಆಸೆಯಿಂದ ನೆಲೆಯಾದಿಕೇಶವನ್ನ ನೆನೆಯದವಗೆ ||ಅ||

ಮಂಡೆ ಬೋಳು ಮಾಡಿ ನಾಮ
ದುಂಡೆಯನ್ನು ಬರೆದು ಕೆಡಿಸಿ
ಕಂಡ ಕಂಡವರನು ಕೂಡಿ
ಭಂಡಜನ್ಮ ಹೊರೆಯುವವಗೆ ||1||

ಅವರವರ ಕೈಯ ನೋಡಿ ಹ
ಲವು ಕೆಲವು ಮಾತನಾಡಿ
ಹಲವು ಹಂಬಲಿಸಿ ದಿನವ
ಕಳೆದು ಉಳಿದು ಬಾಳುವಗೆ ||2||

ಬೆಂದ ಸಂಸಾರವೆಂಬ
ಬಂಧನದೊಳಗೆ ಸಿಲುಕಿಕೊಂಡು
ಚೆಂದಾದಿಕೇಶವನ್ನ
ಒಂದು ಬಾರಿ ನೆನೆಯದವಗೆ ||3||