ದಾಸಾರ್ಯರ ದಾಸರ ದಾಸ ನಾನು
Category: ಶ್ರೀಕೃಷ್ಣ
Author: ಕನಕದಾಸ
ದಾಸಾರ್ಯರ ದಾಸರ ದಾಸ ನಾನು- ಬಾಢ
ದೀಶ ಕಾಯ್ದುಕೊಳ್ಳೊ ||ಪ||
ಗುಟ್ಟು ಮಾಡಿಕೊಂಡಿರದೆ ಕಂಡವರಿಗೆ ಕಾರ್ಪಣ್ಯ
ಪಟ್ಟು ಬಡವನಾದೆನಲ್ಲ- ಅಯ್ಯ ಕೈ
ಗೊಟ್ಟು ರಕ್ಷಿಸುವರಿಲ್ಲ ಜನ್ಮ ಜನ್ಮಂಗಳಲಿ
ಪುಟ್ಟುವಂತೆ ಮಾಡಬೇಡ ಮಾಧವ ಮನ್ನಿಸೊ ಎನ್ನ ||1||
ಮಡದಿ ಮಕ್ಕಳೆಂಬ ಪಾಶ ಮಮತೆ ಎನ್ನ ಕೊರಳ
ಬಿಡದೆ ಸುತ್ತಿಕೊಂಡಿತಲ್ಲಯ್ಯ
ಪಡೆದ ದ್ರವ್ಯವೆಲ್ಲ ವಸ್ತು ಕ್ಷೇತ್ರಂಗಳ ಕಾಣದೆ ನಿತ್ಯ-
ನಡೆದುದ ವಿಸ್ತರಿಸಲಾರೆ ನೀಲಮೇಘಶ್ಯಾಮ ನಿನ್ನ ||2||
ಘೋರ ಸಂಸಾರವೆಂಬ ವಾರಿಧಿಯೊಳಗೆ ಬಿದ್ದು
ಪಾರಗಾಣದವನಾದೆನಲ್ಲಯ್ಯ
ಧೀರ ಕರ್ತನಾದ ಬಾಡದಾದಿಕೇಶವೇಶ ಸರ್ವ
ಸಾರಿದೆ ಸಲಹೊ ಎನ್ನುದ್ಧಾರಿ ಮುದ್ದು ಕೃಷ್ಣ ನಿನ್ನ ||3||