ಅಲ್ಲಿದೆ ನಮ್ಮನೆ

Category: ಶ್ರೀಕೃಷ್ಣ

Author: ಪುರಂದರದಾಸ

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ||

ಕದ ಬಾಗಿಲಿರಿಸಿದ ಕಳ್ಳಮನೆ - ಇದು
ಮುದದಿಂದ ಲೋಲಾಡೊ ಸುಳ್ಳುಮನೆ |
ಇದಿರಾಗಿ ವೈಕುಂಠವಾಸ ಮಾಡುವಂಥ
ಪದುಮನಾಭನ ದಿವ್ಯ ಬದುಕು ಮನೆ ||

ಮಾಳಿಗೆ ಮನೆಯೆಂದು ನೆಚ್ಚಿ ಕೆಡಲಿಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ |
ನಾಳೆ ಯಮದೂತರು ಬಂದಳೆದೊಯ್ವಾಗ
ಮಾಳಿಗೆ ಮನೆಯು ಸಂಗಡ ಬಾರದಯ್ಯ ||

ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಲಿ ನಡೆಯದಿರು |
ಒಡೆಯ ಶ್ರೀ ಪುರಂದರವಿಟ್ಠಲನ ಚರಣವ
ದೃಢಭಕ್ತಿಯಲಿ ನೀ ಭಜಿಸೆಲೊ ಮನುಜನೆ ||