ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ

Category: ಇತರೆ

Author: ಕನಕದಾಸ

ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ
ಸಜ್ಜನರ ಸಂಗದೊಳಗಿರಿಸೆನ್ನ ರಂಗ ||ಪ||

ಉಂಡಮನೆಗೆರಡನು ಎಣಿಸುವಾತನ ಸಂಗ
ಕೊಂಡೆಯವ ಪೇಳಿ ಕಾದಿಸುವನ ಸಂಗ
ತಂದೆ ತಾಯನು ಬೈದು ಬಾಧಿಸುವವನ ಸಂಗ
ನಿಂದಕರ ಸಂಗ ಬಹು ಭಂಗ ರಂಗ ||1||

ನಂಬಿದ ಠಾವಿನಲಿ ಕೇಡನೆಣಿಪನ ಸಂಗ
ಸಂಭ್ರಮದಿ ಜಗಳ ಕಾಯುವನ ಸಂಗ
ಹಂಬಲಿಸಿ ಭವದ ಸುಖ ಮೆಚ್ಚಿದಾತನ ಸಂಗ
ರಂಭೆಯರ ನೋಡಿ ಮೋಹಿಪನ ಸಂಗ ||2||

ಕುಳಿತ ಸಭೆಯೊಳು ಕುಹಕ ಮಾಡುವಾತನ ಸಂಗ
ಬಲು ಬೇಡೆ ಕೊಡದಿರುವ ಲೋಭಿ ಸಂಗ
ಕುಲಹೀನರ ಕೂಡೆ ಸ್ನೇಹ ಬೆಳಿಪನ ಸಂಗ
ಹಲವು ಮಾತಾಡಿ ಆಚರಿಸದವನ ಸಂಗ ||3||

ಗುರುಸತಿಗೆ ಪರಸತಿಗೆ ಎರಡು ಎಣಿಪನ ಸಂಗ
ಗುರುನಿಂದೆ ಪರನಿಂದೆ ಮಾಡುವನ ಸಂಗ
ಪರಹಿತಾರ್ಥದ ಧರ್ಮ ಪಡೆಯದಾತನ ಸಂಗ
ಪರಮಪಾಮರ ಸಂಗ ಬಹುಭಂಗ ರಂಗ ||4||

ಆಗಮ ಮಹಾತ್ಮೆಯನು ಅರಿಯದಾತನ ಸಂಗ
ಯೋಗಿಜನ ಗುರುಗಳನು ನಿಂದಿಪನ ಸಂಗ
ರಾಗದ್ವೇಷಾದಿಯಲಿ ಮುಳುಗೇಳುವನ ಸಂಗ
ಕಾಗಿನೆಲೆಯಾದಿಕೇಶವ ಬಿಡಿಸು ಈ ಭಂಗ ||5||