ಧರೆಯ ಭೋಗವನ್ನು ನಂಬಿ

Category: ಇತರೆ

Author: ಕನಕದಾಸ

ಧರೆಯ ಭೋಗವನ್ನು ನಂಬಿ
ಹರಿಯ ಮರೆದು ಕೆಡಲು ಬೇಡ
ಧರೆಯ ಭೋಗ ಕನಸಿನಂತೆ ಕೇಳು ಮಾನವ ||ಪ||

ತಿರುಕನೋರ್ವನೂರ ಮುಂದೆ
ಮುರುಕು ಧಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸು ಕಂಡನೆಂತೆನೆ
ಪುರದ ಅರಸು ಸತ್ತನವಗೆ
ವರ ಕುಮಾರರಿಲ್ಲದಿರಲು
ಕರಿಯ ಕೈಲಿ ಕುಸುಮ ಮಾಲೆಯಿತ್ತು ಪುರದೊಳು ||1||

ಬಿಡಲದಾರ ಕೊರಳಿನಲ್ಲಿ
ತೊಡರಿಸಲ್ಕೆ ಅವರ ಪಟ್ಟ
ದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸುವುದ ಕಂಡು ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿದ್ದನು ||2||

ಪಟ್ಟಗಟ್ಟಲಾಗ ನೃಪರು
ಕೊಟ್ಟರವಗೆ ಕಪ್ಪಗಳನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೆ
ಪಟ್ಟದರಸಿಯೊಳಗೆ ಸುಖವ
ಪಟ್ಟು ಮನದಿ ಹರುಷಗೊಳಲು
ಪುಟ್ಟಿದವು ಹೆಣ್ಣು ಗಂಡು ಮಕ್ಕಳಾಗಲೆ ||3||

ಓಲಗದೊಳಗಿರುತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನೆನೆದು ಮನದಿ
ಪೇಳೆ ಮಂತ್ರಿಗಳಿಗೆ ಆಗ
ಬಾಲೆಯರನು ನೋಡಿ ಮದುವೆ ಮಾಳ್ಪೆನೆಂದನು ||4||

ನೋಡಿ ವರಗಳೆನುತ ಕಳುಹೆ
ನೋಡಿ ಬಂದೆವೆನಲು ಜೀಯ
ಮಾಡೆ ಮದುವೆ ಮಂಟಪವನು ರಚಿಸಿರೆಂದನು
ಗಾಢ ಸಂಭ್ರಮದೊಳು ಕೂಡಿ
ಮಾಡಿದನವ ಮದುವೆಗಳನು
ರೂಢಿ ಪಾಲರೆಲ್ಲ ಕೇಳಿ ಮೆಚ್ಚುವಂದದಿ ||5||

ಧನದ ಮದವು ರಾಜ್ಯ ಮದವು
ವನಿತೆ ಮದವು ಸುತರ ಮದವು
ಕನಸಿನಲ್ಲಿ ಕಂಢು ತಿರುಕ ಹಿಗ್ಗುತಿದ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆ ಕಂಡು
ಕನಸಿನಲ್ಲೆ ದಿಗಿಲುಗೊಂಡು ಕಣ್ಣು ತೆರೆದನು ||6||

ಮೆರೆಯುತಿದ್ದ ಭಾಗ್ಯವೆಲ್ಲ
ಹರಿದು ಹೋಯಿತೆಂದು ತಿರುಕ
ತಿರಿವುದಕ್ಕೆ ನಾಚುತಿದ್ದ ಮರುಳನಂದದಿ
ಸಿರಿಯು ಕನಸಿನಂತೆ ಕೇಳು
ಅರಿತು ಆದಿಕೇಶವನ್ನ
ಹರುಷದಿಂದ ಭಜಿಸೆ ನಿತ್ಯ ಸುಖವನೀವನು ||7||