ನಂಬು ನಾರಾಯಣನ ನಂಬೋ ನರಹರಿಯ

Category: ಶ್ರೀಕೃಷ್ಣ

Author: ಕನಕದಾಸ

ನಂಬು ನಾರಾಯಣನ ನಂಬೊ ನರಹರಿಯ
ನಂಬಿದಾ ಭಕ್ತರ ಕುಟುಂಬ ಸಾರಥಿಯ ||ಪ||

ಬಲಿನಂಬಿ ಪಾತಾಳಲೋಕಕರಸಾದನದೆ
ಕುಲದ ಪ್ರಹ್ಲಾದನು ನಿಜವ ಕಂಡ
ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ
ಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ ||1||

ಅಂಬರೀಷನು ನಂಬಿ ವೈಕುಂಠವೇರಿದನು
ಹಂಬಲಿಸಿ ಶಶಿಧರನು ಉರಿಯ ಗೆದ್ದ
ಕುಂಭಿನೀದೇವಿ ತಾ ಬಂಧನವ ಕಳೆದಳು
ಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು ||2||

ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನು
ಮತಿ ಭ್ರಷ್ಟ ಅಜಮಿಳನ ಉದ್ಧರಿಸಿದನು
ಕ್ಷಿತಿಯೊಳಗೆ ಕಾಗಿನೆಲೆಯಾದಿಕೇಶವರಾಯ
ಪತಿತ ಪಾವನ ಪರಮಪುರುಷೋತ್ತಮನನು ||3||