ನಡತೆಹೀನನಾದರೇನಯ್ಯ

Category: ಶ್ರೀಕೃಷ್ಣ

Author: ಕನಕದಾಸ

ನಡತೆಹೀನನಾದರೇನಯ್ಯ - ಜಗ
ದೊಡೆಯನ ಭಕುತಿ ಇದ್ದರೆ ಸಾಲದೆ ||ಪ||

ಪುಂಡರಾ ಪಾಂಡುನಂದನರು ಮತ್ತದರೊಳು
ಕಂಡೋರ್ವಳನೈವರು ಭೋಗಿಪರು
ಖಂಡಿಸಿದರು ರಣದೊಳು ಗುರುಹಿರಿಯರ
ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ||1||

ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ
ಕಂದನ ನಿರ್ಬಂಧಿಸುತಿರಲು
ಅಂದು ಸಾಧಿಸಲು ಕಂಬದ ಬಳಿಯೆ ತನ್ನ
ತಂದೆಯ ಕೊಲಿಸಿದನೆಂಬರು ಜನರು ||2||

ದಾಸಿಯ ಜಠರದೊಳು ಜನಿಸಿದ ವಿದುರ - ಸ
ನ್ಯಾಸಿಯೆಂದೆನಿಸಿಕೊಂಡ
ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ
ಕೇಶವನ ಭಕುತಿಯೊಂದಿದ್ದರೆ ಸಾಲದೆ ||3||