ನನ್ನಿಂದ ನಾನೇ ಜನಿಸಿ ಬಂದೆನೆ

Category: ವೈರಾಗ್ಯ

Author: ಕನಕದಾಸ

ನನ್ನಿಂದ ನಾನೇ ಜನಿಸಿ ಬಂದೆನೆ ದೇವ
ಎನ್ನ ಸ್ವತಂತ್ರವು ಲೇಶವಿದ್ದರು ತೋರು ||ಪ||

ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ
ನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮ ||ಅ||

ಜನನಿಯ ಜಠರದಲಿ ನವಮಾಸ ಪರಿಯಂತ
ಘನದಿ ನೀ ಪೋಷಿಸುತಿರೆ, ನಾನು
ಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದ
ವನಜಾಕ್ಷ ನೂಕಿದವನು ನೀನಲ್ಲವೆ ||1||

ಎಲುವುಗಳ ಜಂತೆ ಮಾಡಿ ನರಗಳ ಹುರಿಯಿಂ
ಹೊಲಿದು ಚರ್ಮವ ಹೊದಿಸಿ ದೇಹದೊಳು
ಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿ
ನೆಲಸಿ ಚೇತನವನಿತ್ತವ ನೀನಲ್ಲವೆ ||2||

ಜನಿಸಿದಾರಭ್ಯದಿಂದ ಇಂದಿನ ಪರಿಯಂತ
ಘನಘನ ಪಾಪ ಸುಕರ್ಮಂಗಳನು
ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲ
ಅನುಭವಿಸುವುದು ಜೀವನೊ ನೀನೊ ದೇವ ||3||

ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾ
ಮುಂದಾಳು ತಪ್ಪಿ ಗುಂಡಿಗೆ ಕೆಡಹಲು
ಅಂಧಕನ ತಪ್ಪೋ ಅದು ಮುಂದಾಳಿನ ತಪ್ಪೋ
ಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ ||4||

ಕಂದನ ತಾಯಿ ಆಡಿಸುವಾಗ ಅದು ಪೋಗಿ
ಅಂದಿ ಬಾವಿ ನೋಡುವುದನು ಕಂಡು
ಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರದು
ಕಂದನ ತಪ್ಪೋ ಮಾತೆಯ ತಪ್ಪೋ ಪರಮಾತ್ಮ ||5||

ಭಾರ ನಿನ್ನದೊ ದೂರು ನಿನ್ನದೊ ಕೃಷ್ಣ
ನಾರಿ ಮಕ್ಕಳು ತನುಮನ ನಿನ್ನದಯ್ಯ
ಕ್ಷೀರದೊಳಗದ್ದು ನೀರೊಳಗದ್ದು ಗೋವಿಂದ
ಹೇರನೊಪ್ಪಿಸಿದ ಮೇಲೆ ಸುಂಕವೆ ದೇವ ||6||

ನ್ಯಾಯವಾದರೆ ದುಡುಕು ನಿನ್ನದೊ, ರಂಗ ಮತ್ತ-
ನ್ಯಾಯವಾದರೆ ಪೇಳುವರಾರು
ಮಾಯಾರಹಿತ ಕಾಗಿನೆಲೆಯಾದಿ ಕೇಶವ
ಕಾಯಯ್ಯ ತಪ್ಪನೆಣಿಸದೆ ದೇವ ||7||