ನಾನು ನೀನು ಎನ್ನದಿರು ಹೀನ ಮಾನವ

Category: ವೈರಾಗ್ಯ

Author: ಕನಕದಾಸ

ನಾನು ನೀನು ಎನ್ನದಿರು ಹೀನ ಮಾನವ ||ಪ||
ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ||ಅ||

ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನಲೊ
ಅನ್ನದಿಂದ ಬಂದ ಕಾಮ ನಿನ್ನದೇನೆಲೊ
ಕರ್ಣದಿಂದ ಬರುವ ಘೋಷ ನಿನ್ನದೇನೆಲೊ
ನಿನ್ನ ಬಿಟ್ಟು ಹೋಹ ದೇಹ ನಿನ್ನದೇನಲೊ ||1||

ಹಲವು ಜನ್ಮದಿಂದ ಬಂದಿರುವನು ನೀನೆಲೊ
ಮಲದ ಗರ್ಭದಲಿ ನಿಂದಿರುವನು ನೀನೆಲೊ
ಜಲದ ದಾರಿಯಲಿ ಬಂದಿರುವನು ನೀನೆಲೊ
ಕುಲವು ಜಾತಿ ಗೋತ್ರವುಳ್ಳವನು ನೀನೆಲೊ ||2||

ಕಾಲಕರ್ಮ ಶೀಲನೇಮ ನಿನ್ನದೇನೆಲೊ
ಜಾಲವಿದ್ಯೆ ಬಯಲ ಮಾಯೆ ನಿನ್ನದೇನೆಲೊ
ಕೀಲು ಜಡಿದ ತೊಗಲಗೊಂಬೆ ನಿನ್ನದೇನೆಲೊ
ಲೋಲ ಆದಿಕೆಶವನ ಭಕ್ತನಾಗೆಲೊ ||3||