ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನು
Category: ಶ್ರೀಕೃಷ್ಣ
Author: ಕನಕದಾಸ
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನು
ಏನೆಂದು ಸ್ತುತಿ ಮಾಡಲರಿಯೆ
ಹರಿ ಮುಕುಂದನು ನೀನು ನರಜನ್ಮ ಹುಳು ನಾನು
ಪರಮಪುರುಷನು ನೀನು ಪಾಪಿ ನಾನು
ಗರುಡ ಗಮನನು ನೀನು ದುರುಳ ಕರ್ಮಿಯು ನಾನು
ಪರಂಜ್ಯೋತಿಯು ನೀನು ಪಾಮರನು ನಾನು ||1||
ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನು
ಕ್ಷಣಕ್ಷಣಕೆ ಅವಗುಣದ ಕರ್ಮಿ ನಾನು
ವನಜಸಂಭವನಯ್ಯ ವೈಕುಂಠಪತಿ ನೀನು
ತನುವು ಸ್ಥಿರವಲ್ಲದ ನರಬೊಂಬೆ ನಾನು ||2||
ಕಂಬದಲಿ ಬಂದಂಥ ಆನಂದಪತಿ ನೀನು
ನಂಬಿಗಿಲ್ಲದ ನಿರ್ಜೀವಿ ನಾನು
ಅಂಬರೀಷಗೆ ಒಲಿದ ದುರಿತ ದೂರನು ನೀನು
ಡಂಬಕದ ಮಾಯಾ ಶರೀರಿ ನಾನು ||3||
ವಾರಿಧಿಶಯನ ಭೂರಿ ಕಾರುಣ್ಯಪತಿ ನೀನು
ಘೋರತರ ಕಾಮಕ್ರೋಧಿಯು ನಾನು
ಈರೇಳು ಲೋಕವನು ಪೊಡೆಯಲಿಟ್ಟವ ನೀನು
ಸಾರಿ ಭಜಿಸದ ದುಷ್ಟ ಕರ್ಮಿ ನಾನು ||4||
ತಿರುಪತಿಯೊಳು ನೆಲಸಿದ ವೆಂಕಟೇಶನು ನೀನು
ಚರಣಕೆರಗುವ ಕನಕದಾಸನು ನಾನು
ಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ
ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ ||5||