ನಾರಾಯಣ ಎಂಬ ನಾಮದ ಬೀಜವನು
Category: ಶ್ರೀಕೃಷ್ಣ
Author: ಕನಕದಾಸ
ನಾರಾಯಣ ಎಂಬ ನಾಮದ ಬೀಜವನು ನಾಲಗೆಯ
ಕೂರಿಗೆಯ ಮಾಡಿ ಬಿತ್ತಿರಯ್ಯ ||ಪ||
ತನುವ ನೇಗಿಲು ಮಾಡಿ ಹೃದಯ ಹೊಲವನು ಮಾಡಿ
ತನ್ವಿರಾ ಎಂಬ ಎರಡೆತ್ತು ಹೂಡಿ
ಜ್ಞಾನವೆಂಬೊ ಮಿಣಿಯ ಕಣ್ಣಿ ಹಗ್ಗವ ಮಾಡಿ
ಧ್ಯಾನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ ||1||
ಕಾಮಕ್ರೋಧಗಳೆಂಬ ಗಿಡಗಳನು ತರಿಯಿರಯ್ಯ
ಮದಮತ್ಸರವೆಂಬ ಪೊದೆಯ ಹಿರಿಯಿರಯ್ಯ
ಪಂಚೇಂದ್ರಿಯಗಳೆಂಬ ಮಂಚಿಕೆಯ ಹಾಕಿರಯ್ಯ
ಚಂಚಲವೆಂಬ ಹಕ್ಕಿಯ ಓಡಿಸಿರಯ್ಯ||2||
ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ ಆಯು
ಶ್ಯದ ರಾಶಿಯನು ಅಳೆಯಿರಯ್ಯ
ಇದು ಕಾರಣ ಕಾಗಿನೆಲೆಯಾದಿಕೇಶವನ
ಮುದದಿಂದ ನೆನೆನೆನೆದು ಸುಖಿಯಾಗಿರಯ್ಯ ||3||