ನಾರಾಯಣ ನಿನ್ನ ನಾಮವೊಂದಿರುತಿರೆ
Category: ಶ್ರೀಕೃಷ್ಣ
Author: ಕನಕದಾಸ
ನಾರಾಯಣ ನಿನ್ನ ನಾಮವೊಂದಿರುತಿರೆ
ಬೇರೊಂದು ನಾಮವಿನ್ನ್ಯಾಕಯ್ಯ ||ಪ||
ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆ
ಬೆಟ್ಟವ ಬಳಸಲಿನ್ನ್ಯಾಕಯ್ಯ
ಅಷ್ಟೈಶ್ವರ್ಯದ ಮೃಷ್ಟಾನ್ನವಿರುತಿರೆ
ಬಿಟ್ಟಿಕೂಳನು ತಿನ್ನಲ್ಯಾಕಯ್ಯ ||1||
ಪರುಶದ ಪಾಳಗಳಿರುತಿರೆ ಬೀದಿ
ಜರಿಗಲ್ಲ ತೊಳೆಯಲಿನ್ಯಾಕಯ್ಯ
ಹರಿವಾಣದೊಳಗಮೃತಾನ್ನವಿರುತಿರೆ
ತಿರುಪೆಕೂಳನು ತಿನ್ನಲ್ಯಾಕಯ್ಯ ||2||
ಬೆಲ್ಲವು ಕರದೊಳಗಿರುತಿರೆ ಕಾಡ
ಕಲ್ಲನು ಕಡಿಯಲಿನ್ನ್ಯಾಕಯ್ಯ
ಬಲ್ಲಿದ ನೆಲೆಯಾದಿಕೇಶವನಿರುತಿರೆ
ಚಿಲ್ಲರೆ ದೈವದ ಹಂಬಲ್ಯಾಕಯ್ಯ ||3||