ನಾರಾಯಣಾ ನಮೋ ನಾರಾಯಣಾ
Category: ಶ್ರೀಕೃಷ್ಣ
Author: ಕನಕದಾಸ
ನಾರಾಯಣಾ ನಮೋ ನಾರಾಯಣಾ ||ಪ||
ಘೋರ ಸಂಸಾರ ಭವದೂರ ಋಷಿಜನ ಮನೋ
ಹಾರ ಸಾಕಾರ ಸಿರಿಧರ ರೂಪನೆ ನಮೋ ||ಅ||
ಉತ್ತಾನಪಾದನ ಅಣುಗಗೆ ಧ್ರುವ ಪದವಿ
ಜತ್ತಯಿಸಿ ಕೊಟ್ಟೆ ಶ್ರೀ ನಾರಾಯಣಾ
ಉತ್ಕಚದ ಬಾಲೆಯ ಕಡುಲಜ್ಜೆ ಸಭೆಯೊಳಗೆ
ವಿಸ್ತರಿಸಿ ಕಾಯ್ದೆ ಶ್ರೀ ನಾರಾಯಣಾ
ಕತ್ತರಿಸಿ ನೆಗಳು ನುಂಗಿದ ಕುಮಾರಕನ ತಂ
ದಿತ್ತೆ ಮುನಿವರನಿಗೆ ನಾರಾಯಣಾ
ಚಿತ್ತಜಾರಿ ಕೊಲ್ಲಲಂಬರೀಷ ಭೂ
ಪೋತ್ತಮನ ಕಾಯ್ದೆ ಶ್ರೀ ನಾರಾಯಣಾ ||1||
ನಕ್ರಂಗೆ ಸಿಲ್ಕಿ ನಡುನೀರೊಳೊದರುವ ಗಜವ
ಚಕ್ರದಿಂ ಕಾಯ್ದೆ ಶ್ರೀ ನಾರಾಯಣಾ
ಶುಕ್ರನುಪದೇಶವನು ತವೆ ಜರಿದ ವೈಷ್ಣವರ
ಅಕ್ಕರದಿ ಪಾಲಿಸಿದೆ ನಾರಾಯಣಾ
ಶಕ್ರಜಿತುಪಿತ ಸಹೋದರಗೆ ಸ್ಥಿರರಾಜ್ಯವನು
ಉತ್ಕೃಷ್ಟದಿಂ ಕೊಟ್ಟೆ ನಾರಾಯಣಾ
ದುಷ್ಕೃತದಿ ಸುತನ ಪೆಸರ್ಗೊಂಡವನ ಕಾಯ್ದೆಯೊ ತ್ರಿ
ವಿಕ್ರಿಮಾಂಕಿತ ವೀರ ನಾರಾಯಣಾ ||2||
ದುರಿತಾಬ್ಧಿ ಕುಂಭಸಂಭವ ದುರಿತಗಿರಿವಜ್ರ
ದುರಿತಮದಗಜಸಿಂಹ ನಾರಾಯಣಾ
ದುರಿತಾಹಿ ವೈನತೇಯ ದುರಿತ ಮೃಗ ವ್ಯಾಘ್ರನೆ
ದುರಿತ ವನದಾವಶಿಖಿ ನಾರಾಯಣಾ
ದುರಿತ ಜೀಮೂತಪವನ ದುರಿತಾಂಧಕಾರ ರವಿ
ದುರಿತ ಲತಾಲವಿತ್ರ ನಾರಾಯಣಾ
ದುರಿತ ಮರ್ದನ ಕಾಗಿನೆಲೆಯಾದಿಕೇಶವನೆ
ದುರಿತ ಬಂಧವ ಪರಿದೆ ನಾರಾಯಣಾ ||3||