ನಾರಾಯಣೆನು ಮನವೆ ನರಹರಿಯ ನೆನೆ ಮನವೆ
Category: ಶ್ರೀಕೃಷ್ಣ
Author: ಕನಕದಾಸ
ನಾರಾಯಣೆನು ಮನವೆ ನರಹರಿಯ ನೆನೆ ಮನವೆ
ಘೋರ ದುರಿತಗಳ ಬೆದರಿಸಿ ಓಡಿಸುವುದು ||ಪ||
ಗುರುವಿನುಪದೇಶದಲಿ ಪರಮ ರಹಸ್ಯವನರಿತು
ಮರೆಯದಲೆ ಅಲ್ಲಿ ಅಧಿಕಾರಿಯಾಗೊ
ತಿರುಮಂತ್ರವನು ಜಪಿಸು ತಿರುಲಾಂಛನವ ಧರಿಸು
ಪರಮ ವೈಷ್ಣವರ ಪಂಕ್ತಿಯ ಸೇರು ಮನವೆ ||1||
ಕುಲಛಲಂಗಳ ಬಿಟ್ಟು ಬಲು ಪಾಶಗಳ ತರಿದು
ಹಲವು ಕೊಂಬೆಗೆ ನೀನು ಹರಿದಾಡದೆ
ಸುಲಭದಲಿ ಶ್ರೀಪಾದತೀರ್ಥ ಪ್ರಸಾದವನು
ನೆಲೆಗೊಳಿಸಿ ಆತ್ಮನಿಗೆ ನಿತ್ಯ ಸುಖಿಯಾಗೊ ||2||
ಶೇಷವಿಶೇಷವೆಂದೆನಿಪ ಪರಮಾರ್ಥದೊಳು
ಮೀಸಲಳಿಯದ ಪಾಪರಹಿತನಾಗು
ವಾಸಾಧಿಪತಿ ಕಾಗಿನೆಲೆಯಾದಿಕೇಶವನ
ದಾಸಾನುದಾಸರಿಗೆ ದಾಸ ನೀನಾಗೊ ||3||