ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವ

Category: ಶ್ರೀಕೃಷ್ಣ

Author: ಕನಕದಾಸ

ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವ
ನಿನ್ನ ನಾಮ ಘಂಟಾಕರ್ಣನ ಸಲಹಿದೆ ದೇವ
ನನ್ನನೀಗ ಉದ್ಧರಿಸು ರಂಗಧಾಮ

ತಂದೆಯ ಮುಂದೆ ಮಗನನು ಬೈದು ಭಂಜಿಸಲು
ತಂದೆಯ ಮುಂದೆ ಪತ್ನಿಯ ಪಿಡಿದೆಳೆದು ಅಂಜಿಸಲು
ಕುಂದು ಗಂಡಗಲ್ಲದೆ ಹೆಂಡತಿಗುಂಟೆ
ನಿಂದನೆ ಎಲೆ ದೇವ ||1||

ದೊರೆ ನೋಡುತಿದ್ದಂತೆ ಬಂಟನನು
ಪರರು ಕೊಂಡೊಯ್ಯಲು ಕುಂದು
ಅರಸಗಲ್ಲದೆ ಆಳಿಗೇನು
ಅರಿಯಂತೆ ಬಂದೆನ್ನ ನಡವಳಿಯಲಿ ಸ್ವಾನ
ದುರಿತಂಗಳೆಲ್ಲ ಕಾಡುತಿವೆ
ಪರಿಹರಿಸು ಎಲೆ ದೇವ ||2||

ಊದುವ ಕಾಳೆಯದನರ್ಥಕ
ವಾದಲ್ಲಿ ನುಡಿಸುವ ಬಿರುದು ಒಡೆಯಂಗಲ್ಲದೆ
ಮಾಧವನೆ ಎನ್ನ ನಡವಳಿಯಲ್ಲಿ ಹುರುಳಿಲ್ಲ
ಓದುವುದು ನಿನ್ನ ನಾಮಸ್ಮರಣೆಯೆ ಎಲೆ ದೇವ
ಆದರಿಸು ನಿನ್ನ ಲೆಂಕನ ಪ್ರತಿ ಲೆಂಕನ
ಭೇದವೇತಕೆ ನಿನ್ನ ದಾಸ ನಾನು ಬಾಡ
ದಾದಿ ಪ್ರಸನ್ನ ಕೇಶವನೆ ಎನ
ಗಾದ ದುರ್ಮತಿಯ ಪರಿಹರಿಸು ಎಲೆ ದೇವ ||3||