ನೀನಾರ ಬಾಂಧವನೊ ನಿಖಿಳ ಯಾದವರೊಳಗೆ

Category: ಶ್ರೀಕೃಷ್ಣ

Author: ಕನಕದಾಸ

ನೀನಾರ ಬಾಂಧವನೊ ನಿಖಿಳ ಯಾದವರೊಳಗೆ
ಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ||ಪ||

ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿ
ಓವಿ ಮೊಲೆ ಕುಡಿಸಿದಳ ಅಸುವ ಸೆಳೆದು
ಮಾವ ಕಂಸನ ಕೊಂದು ಮನುಜ ವೇಷದಲಿ ಗಾಂಡೀ
ವಿಯ ಮನೆಯ ಬಂಡಿ ಬೋವನಾದೆ ||1||

ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆ
ಪರಮಭಕ್ತನು ಸ್ವಯಿಚ್ಛಾ ಮರಣಿಯು
ಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿ
ಶರಮಂಚದೊಳುಪಾಯದಲಿ ಮಲಗಿಸಿದೆ ||2||

ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲು
ಸೋದರಳಿಯನು ಮೂರು ಲೋಕವರಿಯೆ
ಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿ
ಸೋದರನ ಷಡುರಥರ ಕೈಲಿ ಕೊಲ್ಲಿಸಿದೆ ||3||

ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ
ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ
ಗರೆಯೆ, ರವಿ ಮಂಡಲಕೆ ಚಕ್ರದಿ ಮರೆಯ ಮಾಡಿ
ನರನ ಕೈಯಿಂದ ಸೈಂಧವನ ಕೊಲ್ಲಿಸಿದೆ ||4||

ಶಪಥದಲಿ ರಣದೊಳರಸನ ಹಿಡಿವೆನೆಂಬವಗೆ
ತಪಸಿಗಳ ತಂದು ತತ್ತ್ವ ಬೋಧಿಸಿ
ಕಪಟವರಿಯದ ನೃಪನ ಕೈಯೊಳನೃತವ ನುಡಿಸಿ
ಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ ||5||

ಯಮಳರನು ಪಡೆದ ತಾಯಿಗೆ ಸಹೋದರನ ಭೂ
ರಮಣರೊಳಗಗ್ಗಳೆಯನತಿ ಧೈರ್ಯನು
ಸಮರದಲಿ ರವಿಸುತನ ರಥಕೆ ಸುತನ ಮಾಡಿ
ಯಮಸುತನ ಕೈಲಿ ಮಾವನ ಕೊಲ್ಲಿಸಿದೆ ||6||

ಜನವರಿಯದಂತೆ ಜೀವನದೊಳಡಗಿರ್ದವಗೆ
ಮನಕೆ ಖತಿಗೊಳಿಸಿ ಬರ ಸೆಳೆದು ನಗುತ
ಅನುವರದೊಳಾಯತದ ತೊಡೆಯ ಸನ್ನೆಯ ತೋರಿ
ಅನಿಲಜನ ಕೈಲಿ ಕೌರವನ ಕೊಲ್ಲಿಸಿದೆ ||7||

ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ
ದಿರದೊಳೈವರು ನಿದ್ರೆಗೈಯುತಿರಲು
ನರವೃಕೋದರ ಧರ್ಮನಂದರನಗಲಸಿಯೆ
ಗುರು ಸುತನ ಕೈಲಿ ಬಾಲಕರ ಕೊಲ್ಲಿಸಿದೆ ||8||

ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿ
ಭಾವ ಮೈದುನರೈವರನು ರಕ್ಷಿಸಿ
ಭೂವಲಯದೊಳು ಕೀರ್ತಿಯನು ಪಡೆದೆಸೆವ ನಮ್ಮ
ದೇವ ನೆಲೆಯಾದಿಕೇಶವ ವೆಂಕಟೇಶ ||9||