ನೀನುಪೇಕ್ಷೆಯ ಮಾಡೆ
Category: ಶ್ರೀಕೃಷ್ಣ
Author: ಕನಕದಾಸ
ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆ
ನಿಗಮಗೋಚರ ಮುಕುಂದ ||ಪ||
ಗಾನರಸಲೋಲ ಆಗಮಶೀಲ ಭಕ್ತಪರಿಪಾಲ
ಸನ್ನುತ ಗೋಪಾಲ ಬಾಲ ||ಅ||
ಜಪತಪಾನುಷ್ಠಾನ ಜಪಿತನೆಂದೆನಿಸುವೆನೆ
ಅಪ್ಪ ಜಾಣತನವೆನ್ನೊಳಿಲ್ಲ
ಗುಪಿತದಿಂದ ದಾನ ಧರ್ಮವನು ನಾ ಮಾಡುವೆನೆ
ಅಪರಿಮಿತ ಧನವು ಇಲ್ಲ
ಅಪಾರ ಕರ್ಮಗಳ ಅನುಸರಿಸಿ ನಡೆವುದಕೆ
ನಿಪುಣತ್ವ ಮೊದಲೆ ಇಲ್ಲ
ರಪಣ ನಿಪುಣತ್ವ ಜಾಣತ್ವ ಇಲ್ಲದಿಹ ಕೃಪಣಗೆ
ಸುಪವಿತ್ರ ನೀನಲ್ಲದೆ ಇಲ್ಲ -ಸಿರಿನಲ್ಲ ||1||
ಆನೆ ನೆಗಳಿಗೆ ಸಿಲುಕಿ ಅರೆಬಾಯಿ ಬಿಡುತಿರಲು
ಮೌನದಿಂ ಬಂದು ಕಾಯ್ದೆ
ಹೇ ನಾರಗಾ ಎಂದಜಮಿಳಗೆ ಮುಕ್ತಿಯನು
ನೀನೊಲಿದು ಕೃಪೆ ಮಾಡಿದೆ
ಹಾನಿಯಿಲ್ಲದ ಪದವಿ ನೀನಿತ್ತು ಧ್ರುವಗೆ ಕಡು
ದೀನತ್ವವನು ಬಿಡಿಸಿದೆ
ದಾನವಾಂತಕ ಸಕಲ ದಿವಿಜ ಮುನಿವಂದ್ಯ ಅಭಿ
ಮಾನಿ ಎನ್ನನೂ ಸಲಹದೆ - ಬರಿದೆ ||2||
ಈಶಣತ್ರಯದ ಬಯಲಾಸೆಯಲಿ ಭ್ರಮೆಗೊಂಡು
ಬೇಸರದಿ ಮನದಿ ನೊಂದು
ಹೇಸಿಗೆಯ ಸಂಸಾರ ಮಾಯಕ್ಕೆ ಸಿಲುಕಿ ನಾ
ಘಾಸಿ ಪಡಲಾರೆನಿಂದು
ವಾಸುದೇವನೆ ನಿನ್ನ ಪೊಂದಿ ಬದುಕುವೆನೆಂದು
ಆಸೆ ಪಡುತಿಹೆನು ಇಂದು
ದಾಸನೆಂದೆನಿಸಿ ಡಂಗುರ ಹೊಯ್ಸಿ ಬಡದಾದಿ
ಕೇಶವನೆ ಕರುಣಿಸಯ್ಯಾ ಬಂದು ||3||