ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ
Category: ವೈರಾಗ್ಯ
Author: ಕನಕದಾಸ
ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ
ಅಚ್ಯುತನ ನಾಮವನು ನೆನೆದು ಸುಖಿಯಾಗೊ ||ಪ||
ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು
ಗಳಿಸದಿರು ನೀ ದುರಿತರಾಶಿಗಳನು
ನಳಿನನಾಭನ ದಿವ್ಯ ನಾಮವನು ನೆನೆನೆನೆದು
ನೆಲೆಯಾದ ಪರಮ ಪದವಿಯ ಪಡೆಯೊ ಮನವೆ ||1||
ನೋಡದಿರು ಪರಸತಿಯ ಕೂಡದಿರು ದುರ್ಜನರ
ಆಡದಿರು ಮಾತುಗಳ ಗರ್ವದಿಂದ
ಬೇಡದಿರು ಕೈಯ ಹಿಂದೆಗೆವ ಲೋಭಿಯನು, ಕೊಂ
ಡಾಡದಿರು ಬೀದಿಗೂಳುಂಬ ದೈವಗಳ ||2||
ನಾನಾ ಜನ್ಮದಿ ಬಂದ ನಾಟಕದ ಬೊಂಬೆಯಿದು
ಮಾನಕ್ಕೆ ಮೆಚ್ಚಿ ನೀ ಮರುಳಾಗದೆ
ಜಾಣತನದಿಂ ಕಾಗಿನೆಲೆಯಾದಿಕೇಶವನ
ಮಾನಸದಲಿ ನೆನೆದು ಸುಖಿಯಾಗು ಮನುಜ ||3||