ನೇಮವಿಲ್ಲದ ಹೋಮ
Category: ಇತರೆ
Author: ಕನಕದಾಸ
ನೇಮವಿಲ್ಲದ ಹೋಮವೇತಕೆ
ರಾಮನಾಮವಿರದ ಮಂತ್ರವೇತಕೆ ||ಪ||
ನೀರು ಮುಣುಗಲು ಏಕೆ ನಾರಿಯಳ ಬಿಡಲೇಕೆ
ವಾರಕೊಂದುಪವಾಸ ಮಾಡಲೇಕೆ
ನಾರಸಿಂಹನ ದಿವ್ಯ ನಾಮವನು ನೆನೆದರೆ
ಘೋರ ಘಾತಕವೆಲ್ಲ ತೊಲಗಿ ಹೋಗುವುದು ||1||
ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆ
ಡಂಭಕದ ವೃತ್ತಿಯಲಿ ಇರಲೇತಕೆ
ಅಂಬುಜನಾಭನನು ಭಾವದಲಿ ನೆನೆದರೆ
ಇಂಬುಂಟು ವೈಕುಂಠವೆಂಬ ಪುರದೊಳಗೆ ||2||
ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆ
ಬೆಂದು ಹೋಗುವುವು ದುರಿತಂಗಳೆಲ್ಲ
ಬಂದ ದುಃಖಗಳೆಲ್ಲ ನಿಲ್ಲದಲೆ ಕಳೆಯುವುವು
ಚೆಂದಾಗಿ ನೆಲೆಯಾದಿಕೇಶವನ ನೆನೆಯೆ ||3||