ಪಥ ನಡೆಯದಯ್ಯ ಪರಲೋಕ

Category: ವೈರಾಗ್ಯ

Author: ಕನಕದಾಸ

ಪಥ ನಡೆಯದಯ್ಯ ಪರಲೋಕ ಸಾಧನಕೆ- ಮ
ನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತ್ತಿರೆ ||ಪ||

ತನುರೋಮ ಗಿಡ ವೃಕ್ಷ ತಳಿತ ಭುಜಲತೆ ಮೆರೆವ
ಘನಸಿಂಹ ಗಜ ಮೃಗಗಳಿಂದೊಪ್ಪುವ
ವನಿತೆಯರ ಕಾಯ ಕಾಂತಾರವೆಂಬ ಮಾರ್ಗದಿ
ಸ್ತನದ್ವಯ ಕಣಿವೆಯ ಮಧ್ಯ ಸೇರಿಹನು ||1||

ಗಿಳಿ ನವಿಲು ಕೋಗಿಲೆ ವಸಂತ ಭ್ರಮರಂಗಳ
ಬಲದೊಡನೆ ಮದನ ಮಾರ್ಗವ ಕಟ್ಟಲು
ಬಲವುಳ್ಳ ಭಕ್ತ ಮುನಿ ಸಂನ್ಯಾಸಿ ಯೋಗಿಗಳು
ಸುಲಿಸಿಕೊಂಡರು, ಕೆಲರು ಸಿಕ್ಕಿದರು ಸೆರೆಯ ||2||

ಕಾಳಗದೊಳಿದಿರಿಲ್ಲ ಸುರರು ದಾನವರು- ಕ
ಟ್ಟಾಳು ಮನ್ಮಥನ ಛಲದಂಕ ಬಿರುದು
ಪೇಳಲೆನ್ನಳವೆ ಬಡದಾದಿಕೇಶವರಾಯ-
ನಾಳ ಸಂಗಡ ಹೋದರಾವ ಭಯವಿಲ್ಲ ||3||