ಪರಮ ಪದವಿಯೆ ಶ್ರೀರಂಗಂ
Category: ಶ್ರೀಕೃಷ್ಣ
Author: ಕನಕದಾಸ
ಪರಮ ಪದವಿಯೆ ಶ್ರೀರಂಗಂ
ಪರವಾಸುದೇವರೆ ಶ್ರೀರಂಗಂ ||ಪ||
ವೇದನಾಲ್ಕು ಶೃಂಗಾರವಾದ
ಓಂಕಾರ ವಿಮಾನವೆ ಶ್ರೀರಂಗಂ
ಸಾಧಿಸಿ ಪೂರ್ವಾಚಾರ್ಯರು ನೆಲಸಿಹ
ಆದಿ ವಿಮಾನವೆ ಶ್ರೀರಂಗಂ ||1||
ಸತ್ಯಲೋಕದಲಿ ಬ್ರಹ್ಮನು ಪೂಜಿಪ
ವಸ್ತು ವಿಮಾನವೆ ಶ್ರೀರಂಗಂ
ಭಕ್ತಿಗೆ ಇಕ್ಷ್ವಾಕುರಾಯಗೊಲಿದು ಬಂದ
ಉತ್ತಮಾಯೋಧ್ಯವೆ ಶ್ರೀರಂಗಂ ||2||
ತ್ರೇತಾಯುಗದಿ ವಿಭೀಷಣನಿಗೆ ರಘು
ನಾಥನು ಕೃಪೆ ಇತ್ತ ಶ್ರೀರಂಗಂ
ಪ್ರೀತಿಸಿ ದಕ್ಷಿಣಭೂಮಿಯೊಳಗೆ ರಂಗ
ನಾಥ ನೆಲಸಿಹ ಶ್ರೀರಂಗಂ ||3||
ಮುನ್ನ ಕಾವೇರಿ ಉಭಯ ಮಧ್ಯದೊ
ಳಿನ್ನು ಶೋಭಿಪುದೆ ಶ್ರೀರಂಗಂ
ಸನ್ನುತ ಭಕ್ತರ ಸಲಹುವ ಬಿರುದಿನೊ
ಳಿನ್ನು ತೋರುವುದೆ ಶ್ರೀರಂಗಂ ||4||
ಶೇಷನ ಮೇಲೆ ಪವಳಿಸಿ ಲಂಕಾ
ದೇಶವ ನೋಡುವ ಶ್ರೀರಂಗಂ
ಶ್ರೀಸಿರಿನಾಯಕೀ ರಮಣ
ಕೇಶವರಾಯರ ಮಹಿಮೆಯೆ ಶ್ರೀರಂಗಂ ||5||