ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ
Category: ಶ್ರೀಕೃಷ್ಣ
Author: ಕನಕದಾಸ
ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ ||ಪ||
ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ||ಅ||
ವರದನು ಕರದಲಿ ಉಷ್ಣಜಲ ಮೃತ್ತಿಕೆಯ
ತರಲು ಕೈ ಸುಟ್ಟಾಗ ಪಣೆಯ ಠೊಣೆದು ಬೈದೆ
ಮರಳಿ ನಾಚಿಕೆ ಇರದೆ ಚರಣಕೆ ಪಾವುಗೆ ತಂ
ದಿರಿಸಿದಪರಾಧ ಎನ್ನದೊ ನಿನ್ನದೊ ದೇವ ||1||
ಬಂದ ಭೃಗು ಮುನಿ ಎದೆಯನೊದೆಯೆ ಆತಗೆ ಪಾಪ
ಅಂದು ಮೂದಲಿಸಿ ಬೈದವರಿಗೆ ದೋಷ
ನಿಂದುದೇ ಹಣೆಯೊಳಗೆಸೆಯೆ ಭೀಷ್ಮಂಗಘವು
ಹೊಂದಿದಾ ಪಾಂಡವರಿಗೆ ಕುಂದು ಬಂದಿತೆ ದೇವ ||2||
ಕುರುಡನಿಗೆ ದಾರಿಯನು ತೋರದೆ ಆತಗೆ ಮುನಿದು
ದರಿಗೆ ನೂಕಿದಡೆ ಅವನು ಏನು ಮಾಡುವನು
ಶಿರಕೆ ತಪ್ಪಾಗಿ ಗುರಿಯಿಡಲದು ಸರಳ ತಪ್ಪೆ
ಅರಸನಾಳ ಕೊಂದಡೆ ಆರೇನು ಮಾಡುವರು ||3||
ಕುಣಿಸಿದರೆ ಆಡುವುದು ಬೊಂಬೆ ಸೂತ್ರಮುಖದಿ
ಇನಿತುಂಟೆ ಕಪಟನಾಟಕ ಸೂತ್ರಧಾರಿ
ಇನಿತಾಡಿಸಿದರಾಡುವೆ ಪಾಪ ಪುಣ್ಯಂಗಳಿಂದ
ಎಣಿಕೆಗಾನಲ್ಲ ನೀನಲ್ಲದಿಲ್ಲ ||4||
ತಂದೆತಾಯಿಗಳು ತಮ್ಮ ಕಂದಗೆ ಸರ್ಪಮುಖ
ದಿಂದ ಕಚ್ಚಿಸಲು ಆ ತಪ್ಪು ಕಂದನದೆ
ಮುಂದರಿಯದಜ್ಞಾನಿಯೆಂದು ಕ್ಷಮಿಸೆಲ್ಲವನು
ತಂದೆ ವೇಲಾಪುರದ ಆದಿಕೇಶವನೆ ||5||