ಪ್ರಾಚೀನ ಕರ್ಮವಿದು ಬಿಡಲರಿಯದು
Category: ಶ್ರೀಕೃಷ್ಣ
Author: ಕನಕದಾಸ
ಪ್ರಾಚೀನ ಕರ್ಮವಿದು ಬಿಡಲರಿಯದು
ಯೋಚನೆಯ ಮಾಡಿ ಬಳಲುವುದೇಕೆ ಮನುಜ ||ಪ||
ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತ
ಖ್ಯಾತಿಯಿಂದಲಿ ರಾವಣನ ಕೊಲ್ಲಿಸಿ
ಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿ
ಪ್ರೀತಿಯಲಿ ಕೌಪೀನ ಬಿಡಿಸಲಿಲ್ಲ ಹರಿಯು ||1||
ಲೋಕಾದಿಲೋಕಗಳ ಚರಿಸುವ ರವಿರಥಕೆ
ಏಕಗಾಲಿಯು ಏಳುಕುದುರೆಗಳ ಕಟ್ಟಿ
ಲೋಕಲೋಕಗಳನೆಲ್ಲ ಚರಿಸುವ ಅರುಣನಿಗೆ
ಬೇಕೆಂದು ಚರಣಗಳ ಕೊಡಲಿಲ್ಲ ಹರಿಯು ||2||
ಸಾಸಿರ ನಾಮದ ಒಡೆಯಾದಿಕೇಶವನ
ಬೇಸರಿಸದೆ ಹೆಗಲ ಮೇಲಿರಿಸಿಕೊಂಡು
ಆಕಾಶ ಮಾರ್ಗದಲಿ ಚರಿಸುವ ಗರುಡನಿಗೆ
ನಾಸಿಕದ ಕೊನೆಡೊಂಕು ತಿದ್ದಲಿಲ್ಲ ಹರಿಯು ||3||