ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ

Category: ಶ್ರೀಕೃಷ್ಣ

Author: ಕನಕದಾಸ

ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ ||ಪ||

ವಿಕಟ ಪೂತನಿಯ ಕೊಂದು
ಶಕಟಾಸುರನ ಪಾದದಿ ತುಳಿದು
ಧಿಕಿಟ ಧಿಕಿಟ ಎನ್ನುತಲಿ
ಕುಕಿಲಿರಿದು ಕುಣಿಯುತ ಮನೆಗೆ ||1||

ಗೋವರ್ಧನ ಪರ್ವತವನೆತ್ತಿ
ಗೋವುಗಳ ಕಾಯ್ದು ತನ್ನ
ಮಾವ ಕಂಸನ ಕೊಂದು
ಕಾವನ ಜನಕ ಪಾಡುತ ಮನೆಗೆ ||2||

ಫಾಲನೇತ್ರ ಚಂದ್ರಶೇಖರನ
ಸುಲಭದಿಂದ ಬಾಧೆಯ ಬಿಡಿಸಿ
ಪಾಲಿಸುವ ಕರುಣದಿಂದ
ಬೇಲಾಪುರದ ಚೆನ್ನ ಕೇಶವ ||3||