ಬಂದಿದೆ ದೂರು ಬರಿದೆ ಪಾಂಡವರಿಗೆ

Category: ಶ್ರೀಕೃಷ್ಣ

Author: ಕನಕದಾಸ

ಬಂದಿದೆ ದೂರು ಬರಿದೆ ಪಾಂಡವರಿಗೆ ||ಪ||
ಕೊಂದವರಿವರು ಕೌರವರನೆಂಬಪಕೀರ್ತಿ ||ಅ||

ಮುನ್ನಿನ ವೈರದಿ ಕಡು ಸ್ನೇಹವ ಮಾಡಿ
ಉನ್ನತ ಲೆತ್ತ ಪಗಡೆಯಾಡಿಸಿ
ತನ್ನ ಕುಹಕದಿಂದ ಕುರುಬಲವ ಕೊಂದವನು
ಘನ್ನಘಾತಕ ಶಕುನಿಯೊ ಪಾಂಡವರೊ ||1||

ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನು
ಧುರದೊಳು ಷಂಡನ ನೆಪದಿಂದಲಿ
ಸರಳ ಮಂಚದ ಮೇಲೆ ಮಲಗಿ ಮೊಮ್ಮಗನ
ಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ ||2||

ಮಗನ ನೆಪದಿ ಕಾಳಗವ ಬಿಸುಟು ಸುರ
ನಗರಿಗೈದಲು ವೈರಾಗ್ಯದಲಿ
ಜಗವರಿಯಲು ಕುರುವಂಶಕ್ಕೆ ಕೇಡನು
ಬಗೆದು ಕೊಂದವನು ದ್ರೋಣನೊ ಪಾಂಡವರೊ ||3||

ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ
ಕೊಟ್ಟ ಭಾಷೆಗೆ ಐವರ ಕೊಲ್ಲದೆ
ನೆಟ್ಟನೆ ರಣಮುಖದಲಿ ತನ್ನ ಪ್ರಾಣವ
ಬಿಟ್ಟು ಕೊಂದವನು ಕರ್ಣನೊ ಪಾಂಡವರೊ ||4||

ಮಥನಿಸಿ ಸೂತತನವ ಮಾಡಿ ರಣದೊಳು
ಅತಿಹೀನಗಳೆಯುತ ರವಿಸುತನ
ರಥದಿಂದಿಳಿದು ಪೋಗಿ ಕೌರವಬಲವನು
ಹತ ಮಾಡಿದವನು ಶಲ್ಯನೊ ಪಾಂಡವರೊ ||5||

ಜಲದೊಳು ಮುಳುಗಿ ತಪವ ಮಾಡಿ ಬಲವನು
ಛಲದಿಂದೆಬ್ಬಿಸಿ ಕಾದುವೆನೆನುತ
ಕಲಿ ಭೀಮಸೇನನ ನುಡಿಗೇಳಿ ಹೊರವಂಟು
ಕುಲವ ಕೊಂದವನು ಕೌರವನೊ ಪಾಂಡವರೊ ||6||

ಕವುರವ ಪಾಂಡವರಿಗೆ ಭೇದ ಪುಟ್ಟಿಸಿ
ಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿ
ಸವುಶಯವಿಲ್ಲದೆ ಕುರುಬಲವ ಕೊಂದವನು
ಹಿವುಸಕನಾದಿಕೇಶವನೊ ಪಾಂಡವರೊ ||7||