ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು

Category: ಶ್ರೀಕೃಷ್ಣ

Author: ಕನಕದಾಸ

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು

ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತು
ಹರಿಯ ನಾಮಾಮೃತ ಕಿವಿಗೊದಗಿತು
ಹರಿಯ ದಾಸರು ಎನ್ನ ಬಂಧು ಬಳಗವಾದರು
ಹರಿಯ ಶ್ರೀಮುದ್ರೆ ಆಭರಣವಾಯ್ತು ||1||

ಮುಕುತರಾದರು ಎನ್ನ ನೂರೊಂದು ಕುಲದವರು
ಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊ
ಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದು
ರುಕುಮಿಣಿಯರಸ ಕೈವಶನಾದನೆನಗೆ ||2||

ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತು
ಮುಂದೆನ್ನ ಜನ್ಮ ಸಫಲವಾಯಿತು
ತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ ||3||