ಬಲ್ಲವರೆ ಬಲ್ಲರು ಎಲ್ಲವರು ಅರಿಯರು
Category: ಶ್ರೀಕೃಷ್ಣ
Author: ಕನಕದಾಸ
ಬಲ್ಲವರೆ ಬಲ್ಲರು ಎಲ್ಲವರು ಅರಿಯರು
ಪುಲ್ಲಲೋಚನ ಪರಬ್ರಹ್ಮನೆಂಬುದನು ||ಪ||
ಅಜಜ್ಞಾನಾಧಿಕ ಬಲ್ಲ ಅನಲಸ್ನೇಹಿತ ಬಲ್ಲ
ಗಜ ಚರ್ಮಾಂಬರ ಬಲ್ಲ ಗರುಡ ಬಲ್ಲ
ಭುಜಗೇಶ್ವರ ಬಲ್ಲ ಭೂರಿಲೋಚನ ಬಲ್ಲ
ತ್ರಿಜಗದಧಿಪತಿ ತ್ರಿವಿಕ್ರಮನೆಂಬುವನು ||1||
ಶುಕಯೋಗೀಶ್ವರ ಬಲ್ಲ ಸುಗುಣ ನಾರದ ಬಲ್ಲ
ಭಕುತ ಪ್ರಹ್ಲಾದ ಬಲ್ಲ ಬಲಿಯು ಬಲ್ಲ
ರುಕುಮಾಂಗದ ಬಲ್ಲ ಋಷಿ ಪರಾಶರ ಬಲ್ಲ
ಮಕರಕುಂಡಲಧರ ಪರಾತ್ಪರನೆಂಬುದನು ||2||
ಅಂಬರೀಶನು ಬಲ್ಲ ಅತ್ತಿ ಋಷಿಯು ಬಲ್ಲ
ಸಂಭ್ರಮದಿ ಮನು ಬಲ್ಲ ಸಹದೇವ ಬಲ್ಲ
ಬೆಂಬಿಡದುದ್ಧವ ಬಲ್ಲ ಬೇಡಿದ ಧ್ರುವ ಬಲ್ಲ
ಕಂಬು ಚಕ್ರಧರ ಕರ್ಮಹರನೆಂಬುದನು ||3||
ವಶಿಷ್ಠ ಮುನಿ ಬಲ್ಲ ವರ ವಿಭೀಷಣ ಬಲ್ಲ
ವಿಶಿಖಶಯನ ಬಲ್ಲ ವಿದುರ ಬಲ್ಲ
ಋಷಿ ವಾಲ್ಮೀಕಿ ಬಲ್ಲ ರಾಜ ವಿದೇಹ ಬಲ್ಲ
ಶಶಿ ಮಿತ್ರನೇತ್ರ ಸರ್ವೋತ್ತಮನಂಬುದನು ||4||
ವಾಗಿನಿಂದಕ್ರೂರ ಬಲ್ಲ ವಚನಿ ಶೌನಕ ಬಲ್ಲ
ಯೋಗಿ ಕಪಿಲ ಬಲ್ಲ ಭೃಗು ಬಲ್ಲನು
ತ್ಯಾಗಿ ಧರ್ಮಜ ಬಲ್ಲ ರಣದೊಳರ್ಜುನ ಬಲ್ಲ
ಕಾಗಿನೆಲೆಯಾದಿಕೇಶವ ಕೈವಲ್ಯನೆಂಬುವನು ||5||