ಬಾಯಿ ನಾರಿದ ಮೇಲೆ ಏಕಾಂತವೆ

Category: ಶ್ರೀಕೃಷ್ಣ

Author: ಕನಕದಾಸ

ಬಾಯಿ ನಾರಿದ ಮೇಲೆ ಏಕಾಂತವೆ
ತಾಯಿ ತೀರಿದ ಮೇಲೆ ತೌರಾಸೆಯೆ ||ಪ||

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ
ಬಣ್ಣಗುಂದಿದ ಮೇಲೆ ಬಹುಮಾನವೆ
ಪುಣ್ಯ ತೀರಿದ ಮೇಲೆ ಪರಲೋಕ ಸಾಧನವೆ
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ ||1||

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ
ಚಳಿಜ್ವರಕೆ ಚಂದನದ ಲೇಪ ಹಿತವೆ
ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ
ಬೆಲೆ ಬಿದ್ದ ಸರಕಿನೊಳು ಲಾಭ ಉಂಟೆ ||2||

ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ
ಸತ್ಯವಾದ ಭಕ್ತಿ ಇರದವಗೆ ಮುಕ್ತಿಯುಂಟೆ ||3||