ಬೀದಿಯೊಳು ಯಾತರಾ ನಂಟು ಬೇಡ
Category: ಶ್ರೀಕೃಷ್ಣ
Author: ಕನಕದಾಸ
ಬೀದಿಯೊಳು ಯಾತರಾ ನಂಟು ಬೇಡ ದಮ್ಮಯ್ಯ ||ಪ||
ಭೇದಿಸಿ ನೋಡುವರುಂಟು ಬೆಂಬತ್ತಿ ಬಾರದಿರಯ್ಯ ||ಅ||
ಕಂಡ ಕಂಡ ಠಾವಿನಲ್ಲಿ ಕಣ್ಣೆತ್ತಿ ನೋಡದಿರಯ್ಯ
ಕಂಡಿಯೊಳು ಕೈಸನ್ನೆ ಮಾಡದಿರಯ್ಯ
ಗಂಡನುಳ್ಳವಳ ಜೊತೆ ಭಂಡಾಟವ್ಯಾಕಯ್ಯ
ಕೊಂಡೆಗಾತಿಯರುಂಟು ದುಡುಕದಿರಯ್ಯ ||1||
ಬೇಳುವೆಯ ಮಾತಾಡಿ ಗಾಳ ಹಾಕದಿರಯ್ಯ
ಬಾಳೆ ಹಣ್ಣಿಗೆ ಕೊಡಲಿ ಬೇಕೆ ದಮ್ಮಯ್ಯ
ಆಳುವ ಅರಸಾಗಿ ನಿನಗಾವ ಬರವಯ್ಯ
ಮೇಳದವರ ಬಿಟ್ಟು ಮೇರೆದಪ್ಪುವರೇನಯ್ಯ||2||
ನೋಡುವರು ಜನರೆಲ್ಲ ನಾಚಿಕೆ ಇಲ್ಲವೇನಯ್ಯ
ಜೋಡು ಕಳಸವ ಹಿಡಿಯದಿರು ಜೋಕೆ ದಮ್ಮಯ್ಯ
ಮಾಡುವ ದೈನ್ಯವ ಬಲ್ಲೆ ಮದ್ದೂರು ನರಸಿಂಹಯ್ಯ
ಕೂಡಿದ ಕನಕನಾದಿಕೇಶವ ನೀನಹುದಯ್ಯ ||3||