ಬೇಡ ಬೇಡ ಎಲೆಲೆ ದುರಿತಗಳಿರಾ

Category: ಶ್ರೀಕೃಷ್ಣ

Author: ಕನಕದಾಸ

ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮ
ಬಾಡದಧಿಪನ ಕಿಂಕರನ ಕೂಡ ತೊಡರು ||ಪ||

ವಾರಿ ಕಲ್ಲಾನೆ ವಜ್ರದ ಮೃಗೇಂದ್ರನ ಕೂಡೆ
ಹೋರಿ ಹೊದುಕುಳಿಗೊಂಡು ಗೆಲಬಲ್ಲುದೆ?
ಭೂರಿ ಭೂತಗಳೆ ಭೂಸತಿಯ ಕಾಂತನ ನಾಮ
ಧಾರಿಗಳ ತೊಡರು ನಿಮಗಳವಡದು ನಾನರಿವೆ ||1||

ಮೇಣದಹಿಕೋಟಿ ದಳ್ಳುರಿಯ ಗರುಡನ ಕೂಡ
ತ್ರಾಣದಿಂ ಕಾದಿ ಜಯಿಸುವುದೆ ಹೇಳಾ
ಕ್ಷೋಣಿಯೊಳು ಕ್ಷೀಣದೈವ ಬ್ರಹ್ಮಾಂಡ ಕೋಟಿಗಳು
ದಾನವಾರಿಯ ದಾಸಗಳವಡವು ನಾನರಿವೆ ||2||

ಹುಲಿಯ ಮೀಸೆಯ ಪಾಶವಿಡಿದು ಗೋವತ್ಸಗಳು
ನಲಿದು ಉಯ್ಯಾಲೆನಾಡುವವೆ ಹೇಳಾ
ಕಲಿ ಬಾಡದಾದಿಕೇಶವರಾಯ ಚಕ್ರದಲಿ
ತಲೆಗಳನು ಚೆಂಡಾಡಿಸುವ ಕಾಣೊ ಬೇಡ ||3||