ಜಾಲಿಯ ಮರದಂತೆ

Category: ಶ್ರೀಕೃಷ್ಣ

Author: ಪುರಂದರದಾಸ

ಜಾಲಿಯ ಮರದಂತೆ ಧರೆಯೊಳು | ದುರ್ಜನರು
ಜಾಲಿಯ ಮರದಂತೆ ||
ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ ||

ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ|
ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ ||

ತನ್ನಿಂದ ಉಪಕಾರ ತೊಟಕಾದರೂ ಇಲ್ಲ
ಬಿನ್ನಾಣ ಮಾತಿಗೆ ಕೊನೆಯಿಲ್ಲವು |
ಅನ್ನಕ್ಕೆ ಸೇರಿದ ಹೀನ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿಟ್ಠಲ ||