ಮಂದರಧರ ಪಾವನ ಇಂದಿರಾರಮಣನ

Category: ಶ್ರೀಕೃಷ್ಣ

Author: ಕನಕದಾಸ

ಮಂದರಧರ ಪಾವನ ಇಂದಿರಾರಮಣನ- ಗೋವಿಂದ ಎನ್ನಿರೋ ||ಪ||
ನಂದನ ಕಂದ ಮುಕುಂದಾಬ್ಧಿಶಯನನ- ಗೋವಿಂದ ಎನ್ನಿರೋ ||ಅ||

ಗರಳಕಂಧರ ಸಖನನುಜನ ಕೊಂದನ- ಗೋವಿಂದ ಎನ್ನಿರೋ
ಸುರಮುನಿಯನುಜನ ಪಾದವ ಪಿಡಿದನ- ಗೋವಿಂದ ಎನ್ನಿರೋ
ಪರಮ ವೈಷ್ಣವರ ಕೈಲಿ ದಾನವ ಪಿಡಿದನ- ಗೋವಿಂದ ಎನ್ನಿರೋ
ಉರಗನ ಮಗಳ ಗಂಡಗೆ ಪ್ರಾಣವಿತ್ತನ- ಗೋವಿಂದ ಎನ್ನಿರೋ ||1||

ಸತಿ ರುಕ್ಮಿಣಿ ರಾಧೆಯ ಚುಂಬಿಸಿದಾತನ- ಗೋವಿಂದ ಎನ್ನಿರೋ
ಅತಿಶಯದಿಂದ ಸತಿ ರೂಪ ತಾಳ್ದನ- ಗೋವಿಂದ ಎನ್ನಿರೋ
ಪಿತನ ಮಾತನು ಶಿರದೊಳಗಾಂತು ನಡೆದನ- ಗೋವಿಂದ ಎನ್ನಿರೋ
ಮತಿವಂತನಾಗಿ ಮಾತೆಯ ಶಿರವ ತರಿದನ- ಗೋವಿಂದ ಎನ್ನಿರೋ ||2||

ಕರೆತರಿಸಿದ ಮಾವನ ಕೊಂದಾತನ- ಗೋವಿಂದ ಎನ್ನಿರೋ
ಧರೆಯ ಒಯ್ದನ ಕಾಯಗಳೆದನ- ಗೋವಿಂದ ಎನ್ನಿರೋ
ಈರೇಳು ಭುವನಗಳ ಉದರದೊಳಿಟ್ಟನ- ಗೋವಿಂದ ಎನ್ನಿರೋ
ಮಾರಜನಕ ಕಾಗಿನೆಲೆಯಾದಿಕೇಶವನ- ಗೋವಿಂದ ಎನ್ನಿರೋ ||3||