ಮಗನಿಂದೆ ಗತಿಯುಂಟೆ ಜಗದೊಳಗೆ
Category: ಶ್ರೀಕೃಷ್ಣ
Author: ಕನಕದಾಸ
ಮಗನಿಂದೆ ಗತಿಯುಂಟೆ ಜಗದೊಳಗೆ
ನಿಗಮಾರ್ಥ ತತ್ತ್ವವಿಚಾರದಿಂದಲ್ಲದೆ? ||ಪ||
ತ್ರಿಗುಣರಹಿತ ಪರಮಾತ್ಮನ ಧ್ಯಾನದಿ
ಹಗಲಿರುಳು ನಿತ್ಯಾನಂದದಿಂದ
ತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆ
ಮಗನಿದ್ದರೇನು ಇಲ್ಲದಿದ್ದರೇನು? ||1||
ಲಲನೆಯರು ಪುರುಷರು ತಮತಮ್ಮ ಕಾಮದ
ಸಲುವಾಗಿ ಕೂಡೆ ಶೋಣಿತ ಶುಕ್ಲದಿ
ಮಿಳಿತವಾದ ಪಿಂಡ ತನ್ನ ಪೂರ್ವಕರ್ಮದಿಂದ
ನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ? ||2||
ಪರಮ ದುಷ್ಟನಾಗಿ ಮರೆತು ಸ್ವಧರ್ಮವ
ಗುರು ಹಿರಿಯರ ಸಾಧುಗಳ ನಿಂದಿಸಿ
ಬೆರೆದನ್ಯ ಜಾತಿಯ ಪರನಾರಿಯ ಕೂಡಿ
ಸುರೆ ಕುಡಿದು ಜೂಜಾಡಿ ನರಕಕ್ಕೆ ಬೀಳುವ ||3||
ಸತ್ಯನೊಬ್ಬ ಮಗ ಶಾಂತನೊಬ್ಬ ಮಗ ದು-
ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನು
ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ
ಹೆತ್ತರೇನು ಇನ್ನು ಹೆರದಿದ್ದರೇನಯ್ಯ? ||4||
ಸುತರಿಲ್ಲದವಗೆ ಸದ್ಗತಿ ಇಲ್ಲವೆಂತೆಂಬ
ಕೃತಕ ಶಾಸ್ತ್ರವು ಲೌಕಿಕಭಾವಕೆ
ಕ್ಷಿತಿಯೊಳು ಕಾಗಿನೆಲೆಯಾದಿಕೇಶವ ಜಗ
ತ್ಪತಿಯ ಭಜಿಪಗೆ ಸದ್ಗತಿಯಿರದೆ ಹೋಹುದೆ? ||5||